ನಿಧನ: ಡಾ. ಪೀಟರ್ ಗೋನ್ಸಾಲ್ವೀಸ್

ಭಟ್ಕಳ, ಜೂ. 2: ಗೋನ್ಸಾಲ್ವೀಸ್ ಡಾಕ್ಟರ್ ಎಂದೇ ಖ್ಯಾತರಾಗಿದ್ದ ವೈದ್ಯ ಆರೋಗ್ಯ ಮಾತಾ ನರ್ಸಿಂಗ್ ಹೋಮ್ ಮಾಲಕ ಡಾ. ಪೀಟರ್ ಗೋನ್ಸಾಲ್ವೀಸ್ (75) ಹೃದಯಾಘಾತದಿಂದ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿದನರಾಗಿದ್ದಾರೆ.
ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ನಂತರ ಡಾ. ಪೀಟರ್ ಗೋನ್ಸಾಲ್ವೀಸ್ ಭಟ್ಕಳದಲ್ಲಿ ನರ್ಸಿಂಗ್ ಹೋಮ್ ಸ್ಥಾಪಿಸಿದ್ದು ಇವರ ನರ್ಸಿಂಗ್ ಹೋಮ್ ಅಂದು ಪ್ರಥಮದ್ದಾಗಿತ್ತೆನ್ನುವುದು ವಿಶೇಷವಾಗಿದೆ. ಆರಂಭದ ದಿನಗಳಲ್ಲಿ ಬೇರೆ ಎಲ್ಲಿಯೂ ನರ್ಸಿಂಗ್ ಹೋಮ್ ಇಲ್ಲದೇ ಇರುವುದರಿಂದ ಬಡವರಿಗಾಗಿಯೇ ಒಂದು ವಾರ್ಡನ್ನು ತೆರೆದು ಅತೀ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದ ಅವರು, ಆ ದಿನಗಳಲ್ಲಿ ಚಿಕ್ಕ ಪುಟ್ಟ ಪ್ಲಾಸ್ಟಿಕ್ ಸರ್ಜರಿಯಂತಹ ಆಪರೇಶನ್‌ಗಳನ್ನು ಕೂಡಾ ಮಾಡುತ್ತಿದ್ದರು. ಮೃದುವಾದ ಮಾತು, ಉತ್ತಮ ಚಿಕಿತ್ಸೆಯಿಂದ ಮನೆ ಮಾತಾಗಿರುವ ಅವರು ಕಳೆದ ಸುಮಾರು 43 ವರ್ಷಗಳ ಕಾಲ ಆರೋಗ್ಯ ಮಾತಾ ನರ್ಸಿಂಗ್ ಹೋಮ್ ನಡೆಸಿಕೊಂಡು ಬಂದಿದ್ದಾರೆ. ತಮ್ಮ ಮೂವರು ಪುತ್ರಿಯರನ್ನು ಕೂಡಾ ವೈದ್ಯಕೀಯ ಸೇವೆಗೆ ತೊಡಗಿಸಿದ ಅವರು ಪತ್ನಿ, ಮೂವರು ಪುತ್ರಿಯರು, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಡಾ. ಪೀಟರ್ ಗೋನ್ಸಾಲ್ವೀಸ್ ಅವರ ನಿಧನಕ್ಕೆ ಭಟ್ಕಳ ಐ.ಎಂ.ಎ. ತೀವ್ರ ಸಂತಾಪ ಸೂಚಿಸಿದೆ. ಐ.ಎಂ.ಎ. ಅಧ್ಯಕ್ಷ ಡಾ. ಆರ್. ವಿ. ಸರಾಫ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದೆ ಐ.ಎಂ.ಎ. ಸದಸ್ಯರುಗಳು ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ, ಅವರ ಕುಟುಂಬಕ್ಕೆ ದುಖ ಸಹಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.





