ಫಾ. ಮುಲ್ಲಾರ್ ಹೋಮಿಯೊಪಥಿ ಮೆಡಿಕಲ್ ಕಾಲೇಜ್ 2018-19ನೆ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ
ಮಂಗಳೂರು, ಜೂ. 2: ಫಾದರ್ ಮುಲ್ಲಾರ್ ಹೋಮಿಯೊಪಥಿ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ 2018-19ನೆ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಹಾಗೂ ಫಾದರ್ ಮುಲ್ಲಾರ್ ಚ್ಯಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ಸ್ ಅಲೋಶಿಯಸ್ ಕೊಯೆಲ್ಲೋ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ವಿದ್ಯಾರ್ಥಿಗಳ ಹಕ್ಕುಗಳ ಜೊತೆ ಹೊಣೆಗಾರಿಕೆ ಹಾಗೂ ಕರ್ತವ್ಯದೊಂದಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶುಭಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀನಿವಾಸ್ ಕಾಲೇಜ್ ಫಾರ್ಮಸಿಯ ಪ್ರಾಂಶುಪಾಲ ಡಾ.ಎ.ಆರ್. ಸುಬ್ರಾಯ ಮಾತನಾಡುತ್ತಾ, ಆರೋಗ್ಯ ಕರ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿನಲ್ಲಿ ವೃತ್ತಿಪರತೆಯನ್ನು ತೋರಿಸಬೇಕು ಎಂದರು.
ಫಾದರ್ ಮುಲ್ಲಾರ್ ಹೋಮಿಯೊಪಥಿ ಮೆಡಿಕಲ್ ಕಾಲೇಜ್‌ನ ಆಡಳಿತಾಧಿಕಾರಿ ವಂ.ವಿನ್ಸೆಂಟ್ ವಿನೋದ್ ಸಲ್ದಾನಾ ವಿದ್ಯಾರ್ಥಿ ಸಂಘದ ಪದಾಧಿಕಾರಿ ಗಳಿಗೆ ಪ್ರಮಾಣವಚನ ಭೋದಿಸಿ ಶುಭ ಹಾರೈಸಿದರು. ಡಾ.ಗಿರೀಶ್ ನಾವಡ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಶಿವಪ್ರಸಾದ್ ಕೆ 2018-19ನೆ ಸಾಲಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದರು.
ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ನಂದನ್ ಕೃಷ್ಣ, ನಿಕಟ ಪೂರ್ವ ಅಧ್ಯಕ್ಷ ಎಂ.ಉಪೇಂದ್ರ ನಾದ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯ ಜೆ.ಅಬ್ರಹಾಂ ವಂದಿಸಿದರು.







