ಶಾಸಕ ವೇದವ್ಯಾಸ್ ಕಾಮತ್‌ರಿಂದ ಅಹವಾಲು ಸ್ವೀಕಾರ
ಮಂಗಳೂರು, ಜೂ.3: ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ಆಭಿವೃದ್ಧಿ ಹಾಗೂ ಅದಕ್ಕೆ ಪೂರಕವಾಗುವಂತೆ ಸ್ಟಾಫ್ ಕೌನ್ಸಿಲ್ ಸಮಿತಿಗಳನ್ನು ರಚಿಸುವ ಬಗ್ಗೆ ಗಮನ ನೀಡುವುದಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಅಟಲ ಸೇವಾ ಕೇಂದ್ರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾಲೇಜು ಮುಖ್ಯಸ್ಥರು, ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಭರವಸೆ ನೀಡಿದರು.
ನಗರದಲ್ಲಿರುವ ಸರಕಾರಿ ಪದವಿ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲೂ ಚಿಂತಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಆಹವಾಲುಗಳನ್ನು ಸ್ವೀಕರಿಸಿದ ಶಾಸಕರು ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಜರಗಿಸುವಂತೆ ಆದೇಶ ನೀಡಿದರು. ಇದಲ್ಲದೆ ರಸ್ತೆ ದುರಸ್ತಿ, ಒಳಚರಂಡಿ ಅವ್ಯವಸ್ಥೆ , ಸ್ವಚ್ಛತೆ ಮುಂತಾದ ದೂರುಗಳು ಕೂಡಾ ಸಲ್ಲಿಕೆಯಾದವು.
ಮಳೆ ಹಾನಿ ಪರಿಹಾರಕ್ಕೆ ಮನವಿ
ನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶದ ಸಂತ್ರಸ್ತರು ಪರಿಹಾರ ಒದಗಿಸಿಕೊಡುವಂತೆ ಶಾಸಕರಿಗೆ ಮನವಿಯನ್ನು ಸಲ್ಲಿಸಿದರು. ಮನೆಯಿಂದ ಹಾನಿಯಿಂದ ನಷ್ಟ ಅನುಭವಿಸುತ್ತಿರುವ ಎಲ್ಲರಿಗೂ ನೆರವು ನೀಡುವುದು ಸರಕಾರಕ ಕರ್ತವ್ಯ. ಈ ಬಗ್ಗೆ ತಕ್ಷಣದಲ್ಲಿ ಕ್ರಮ ಜರಗಿಸುವಂತೆ ಈಗಾಗಲೇ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ರಿಕ್ಷಾ ಪಾರ್ಕಿಂಗ್ ಹಾಗೂ ಪರ್ಮಿಟ್ ನೀಡುವ ಬಗ್ಗೆ ಸಾರಿಗೆ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು , ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಅಟೋ ಚಾಲಕರು, ಮಾಲಕರ ನಿಯೋಗವೊಂದು ಶಾಸಕರಿಗೆ ಮನವಿ ಸಲ್ಲಿಸಿತು. ಈ ವಿಚಾರದಲ್ಲಿ ಸೂಕ್ತ ಗಮನ ಹರಿಸಿ, ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ವೇದವ್ಯಾಸ ಕಾಮತ್ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಅಂಗವಿಕಲರು, ನಿರೋದ್ಯೋಗಿಗಳು ಉದ್ಯೋಗ ಸಂಬಂಧಿ ಅರ್ಜಿಗಳನ್ನು ಶಾಸಕರಿಗೆ ಸಲ್ಲಿಸಿದರು.







