ರಿಕ್ಷಾ ಚಾಲಕನ ಕೊಲೆಯತ್ನ ಪ್ರಕರಣ: ಆರೋಪಿ ಮಹಿಳೆಗೆ ಜಾಮೀನು
ಪುತ್ತೂರು, ಜೂ. 2 : ಕಡಬ ಸಮೀಪದ ನೆಕ್ಕಿತ್ತಡ್ಕ ಬಳಿ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ರಿಕ್ಷಾ ಚಾಲಕನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮಹಿಳೆಯೊಬ್ಬರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಐತ್ತೂರು ಗ್ರಾಮದ ಕೇನ್ಯ ನಿವಾಸಿಯಾದ ರಿಕ್ಷಾ ಚಾಲಕ ಉಮೇಶ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಪುತ್ತೂರು ತಾಲೂಕಿನ ಐತ್ತೂರು ಗ್ರಾಮದ ಸುಳ್ಯಕಾಡು ನಿವಾಸಿ ಚಂದ್ರಹಾಸ ಗೌಡ ಅವರ ಪತ್ನಿ ಕುಸುಮಾವತಿ ಜಾಮೀನು ಪಡೆದುಕೊಂಡ ಮಹಿಳೆ.
ರಿಕ್ಷಾ ಚಾಲಕ ಉಮೇಶ್ ಅವರು ಕಳೆದ ಮೇ.13ರಂದು ಕಡಬದಿಂದ ಮರ್ದಾಳಕ್ಕೆ ತೆರಳುತ್ತಿದ್ದ ವೇಳೆ ಆಲ್ಟೋ ಕಾರಿನಲ್ಲಿ ಬಂದ ತಂಡವೊಂದು ಬಂಟ್ರ ಗ್ರಾಮದ ಜಾಜಿನಡೆ ಎಂಬಲ್ಲಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಹಲ್ಲೆಗೆ ಮುಂದಾಗಿದ್ದ ವೇಳೆ ಉಮೇಶ್ ಅವರು ಅವರಿಂದ ತಪ್ಪಿಸಿಕೊಂಡು ಓಡಿಹೋಗಿದ್ದರು. ತಂಡವು ಅವರಿಗೆ ತಲವಾರಿನಿಂದ ಕಡಿದು ಪರಾರಿಯಾಗಿತ್ತು.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಕಡಬ ಪೊಲೀಸರು ಮೇ.15ರಂದು ಐತ್ತೂರು ಗ್ರಾಮದ ಸುಖ್ಯಕಾಡು ನಿವಾಸಿ ಚಂದ್ರಹಾಸ ಗೌಡ ಅವರ ಪತ್ನಿ ಕುಸುಮಾವತಿ ಹಾಗೂ ಬೆಳ್ತಂಗಡಿ ಗ್ರಾಮದ ನಿಡ್ಲೆ ಚೆನ್ನಕೇಶವ ಪೂಜಾರಿ ಅವರ ಪುತ್ರ ಸುಬ್ಬು ಯಾನೆ ಸುಬ್ರಹ್ಮಣ್ಯ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪೈಕಿ ಕುಸುಮಾವತಿ ಅವರಿಗೆ ಇದೀಗ ಜಾಮೀನು ಲಭಿಸಿದೆ. ಆರೋಪಿ ಕುಸುಮಾವತಿ ಪರವಾಗಿ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.
ಬಂಧಿತ ಆರೋಪಿ ಸುಬ್ಬು ಯಾನೆ ಸುಬ್ರಹ್ಮಣ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.







