ಇರಾಕಿ ರೋಗಿಯ ಎದೆಯಿಂದ 9 ಕೆ.ಜಿ.ತೂಕದ ಗಡ್ಡೆಯನ್ನು ಹೊರತೆಗೆದ ವೈದ್ಯರು!

ಗುರ್ಗಾಂವ್,ಜೂ.2: 41ರ ಹರೆಯದ ಇರಾಕಿ ಪ್ರಜೆಯ ಎದೆಯಲ್ಲಿ ಬೆಳೆದಿದ್ದ 9 ಕೆ.ಜಿ.ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರಕ್ಕೆ ತೆಗೆಯುವ ಮೂಲಕ ಇಲ್ಲಿಯ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವೈದ್ಯರು ಆತನಿಗೆ ಪುನರ್ಜನ್ಮ ನೀಡಿದ್ದಾರೆ.
ರೋಗಿ ಧಿಯೀ ಸಲೀಂ ಅವರ ಮೀಡಿಯಾಸ್ಟಿನಮ್, ಅಂದರೆ ಎದೆಗೂಡನ್ನು ಬಲ ಮತ್ತು ಎಡ ಭಾಗಗಳನ್ನಾಗಿ ವಿಭಜಿಸುವ ವಪೆಯಲ್ಲಿ ಈ ಗಡ್ಡೆ ಬೆಳೆದಿತ್ತು ಮತ್ತು ಅವರ ಶ್ವಾಸಕೋಶಗಳು ಹಾಗೂ ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತಿತ್ತು. ಇದು ಅವರ ಅಪಧಮನಿಗಳನ್ನು ಸಂಕುಚಿತಗೊಳಿಸಿತ್ತು ಮತ್ತು ಅವರ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡಿತ್ತು ಹಾಗೂ ತೀವ್ರ ಎದೆನೋವನ್ನುಂಟು ಮಾಡುತ್ತಿತ್ತು ಎಂದು ಆಸ್ಪತ್ರೆಯ ನಿರ್ದೇಶಕ ಹಾಗು ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಉದ್ಗಿತ್ ಧೀರ್ ಅವರು ತಿಳಿಸಿದರು.
ಸಲೀಂ ಅವರಿಗೆ ಬಹುಬೇಗನೇ ಆಯಾಸವಾಗುತ್ತಿತ್ತು ಮತ್ತು ತನ್ನ ದೈನಂದಿನ ಕೆಲಸಗಳನ್ನು ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಅವರು ಫೋರ್ಟಿಸ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾಗ ಅವರ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದರು.
ವೈದ್ಯರ ತಂಡವು ಎ.21ರಂದು ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗಡ್ಡೆಯನ್ನು ಹೊರಕ್ಕೆ ತೆಗೆದಿತ್ತು. ಮೂರು ದಿನಗಳಲ್ಲಿ ಸಲೀಂ ಚೇತರಿಸಿಕೊಂಡಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಅವರು ಈಗ ಸಹಜ ಜೀವನವನ್ನು ನಡೆಸುತ್ತಿದ್ದರೆ ಎಂದು ಧೀರ್ ತಿಳಿಸಿದರು.







