ಹಾಲಿದ ದರ ಕಡಿಮೆ ಪ್ರಸ್ತಾಪವಿಲ್ಲ: ಕುಮಾರಸ್ವಾಮಿ

ಬೆಂಗಳೂರು, ಜೂ. 2: ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡುವ ಬಗ್ಗೆ ಸರಕಾರಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲ. ಆದರೆ, ಹಾಲು ಉತ್ಪಾದಕರ ಸಹಕಾರ ಸಂಘಗಳು ನಷ್ಟ ಸರಿದೂಗಿಸಲು ಇಂತಹ ಚಿಂತನೆ ಮಾಡಿರಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಯಾಗುತ್ತಿದೆ. ಈ ಹಿಂದೆ 45 ಲಕ್ಷ ಲೀಟರ್‌ಗಳಷ್ಟಿದ್ದ ಹಾಲಿನ ಉತ್ಪಾದನೆ ಇದೀಗ 81ರಿಂದ 83 ಲಕ್ಷ ಲೀಟರ್‌ಗಳಿಗೆ ಏರಿಕೆಯಾಗಿದೆ. ಆ ಪೈಕಿ 36ಲಕ್ಷ ಲೀಟರ್‌ನಷ್ಟು ಮಾತ್ರ ರಾಜ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.
ಉಳಿದ ಹಾಲನ್ನು ಹೊರ ರಾಜ್ಯಕ್ಕೆ ಕಳುಹಿಸಬೇಕು. ಅಲ್ಲದೆ, ಮತ್ತೊಂದಿಷ್ಟು ಹಾಲನ್ನು ಪೌಡರ್ ಮಾಡಬೇಕಿದೆ. ಹೀಗಾಗಿ ಕೆಲ ಹಾಲು ಉತ್ಪಾದಕರ ಸಹಕಾರ ಸಂಘಗಳು ನಷ್ಟಕ್ಕೆ ಸಿಲುಕಿದ್ದು, ಅದನ್ನು ಸರಿದೂಗಿಸಿಕೊಳ್ಳಲು ಸಂಘಗಳು ದರ ಇಳಿಕೆಗೆ ಚಿಂತನೆ ಮಾಡಿರಬಹುದು. ಆದರೆ, ಈ ವಿಷಯದಲ್ಲಿ ರಾಜ್ಯ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.





