ಕಾವೇರಿ ಜಲ ವಿವಾದ ಪರಿಹರಿಸಲು ಕೇಂದ್ರದಿಂದ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ

ಹೊಸದಿಲ್ಲಿ, ಜೂ. 2: ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ನಡುವಿನ ಜಲ ವಿವಾದವನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರಕಾರ ಶುಕ್ರವಾರ ಕಾವೇರಿ ಜಲ ನಿರ್ವಹಣಾ ಮಂಡಳಿ ರೂಪಿಸಿದೆ.
ಮಂಡಳಿಗೆ ಅಧ್ಯಕ್ಷರು ಮುಖ್ಯಸ್ಥರಾಗಿರುವರು ಹಾಗೂ ಇಬ್ಬರು ಪೂರ್ಣಕಾಲಿಕ ಹಾಗೂ ಇನ್ನಿಬ್ಬರು ಅರೆ ಕಾಲಿಕ ಸದಸ್ಯರಾಗಿರುವರು. ಪೂರ್ಣಕಾಲಿಕ ಸದಸ್ಯರನ್ನು ಕೇಂದ್ರ ನಿಯೋಜಿಸಲಿದೆ ಇತರ ಇಬ್ಬರನ್ನು ನಾಮನಿರ್ದೇಶನಗೊಳಿಸಲಾಗುವುದು. ಇದಲ್ಲದೆ, ಸಮಿತಿಯ ಹೆಚ್ಚುವರಿ ಅರೆಕಾಲಿಕ ಸದಸ್ಯರಾಗಿ ಪ್ರತಿ ರಾಜ್ಯ ಓರ್ವ ಪ್ರತಿನಿಧಿಯನ್ನು ನಾಮನಿರ್ದೇಶಿಸಲಿದೆ. ಮಂಡಳಿಯ ಕಾರ್ಯದರ್ಶಿಯನ್ನು ಕೇಂದ್ರ ನಿಯೋಜಿಸಲಿದೆ. ಸುಪ್ರೀಂ ಕೋರ್ಟ್ ಕಾವೇರಿಗೆ ಸಂಬಂಧಿಸಿದ ಎಲ್ಲ ಮನವಿಗಳನ್ನು ಮೇ 18ರಂದು ವಿಲೇವಾರಿ ಮಾಡಿದ ಬಳಿಕ ಪ್ರಸ್ತಾಪಿತ ಕಾವೇರಿ ಜಲ ನಿರ್ವಹಣಾ ಮಂಡಳಿಗೆ ಅನುಮೋದನೆ ನೀಡಿದ ಬಳಿಕ ಹಾಗೂ ಗಝೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದ ಬಳಿಕ ಮನ್ಸೂನ್ ಮಳೆ ಬೀಳುವ ಮೊದಲು ಪ್ರಾಮಾಣಿಕವಾಗಿ ಜಾರಿಗೆ ತರಬೇಕು ಎಂದು ಹೇಳಿದ ಬಳಿಕ ಸರಕಾರದ ಈ ಅಧಿಸೂಚನೆ ಹೊರಬಿದ್ದಿದೆ.





