ಭಾರತದ ಹೊಗೆರಹಿತ ತಂಬಾಕು ಉತ್ಪನ್ನಗಳಿಂದ ಆರೋಗ್ಯಕ್ಕೆ ಗಂಭೀರ ಅಪಾಯ
ಅಧ್ಯಯನ ವರದಿ ಬಹಿರಂಗ

ಹೊಸದಿಲ್ಲಿ,ಜೂ.2: ಭಾರತದಲ್ಲಿ ವ್ಯಾಪಕವಾಗಿರುವ ಪಾನ್, ಗುಟ್ಕಾ, ನಶ್ಯದಂತಹ ಹೊಗೆರಹಿತ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯೆಂದು ಐಸಿಎಂಆರ್ ಹಾಗೂ ರಾಷ್ಟ್ರೀಯ ಕ್ಯಾನ್ಸರ್ ತಡೆ ಹಾಗೂ ಸಂಶೋಧನಾ ಸಂಸ್ಥೆ (ಎನ್‌ಐಸಿಪಿಆರ್) ನಡೆಸಿದ ಅಧ್ಯಯನ ವರದಿಯೊಂದು ಶನಿವಾರ ತಿಳಿಸಿದೆ. ಹೊಗೆರಹಿತ ತಂಬಾಕು ಉತ್ಪನ್ನಗಳು ಹಾಗೂ ಬಾಯಿ ಕಾನ್ಸರ್‌ಗೂ ನಡುವೆ ಇರುವ ನಂಟಿಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಸಿ, ಈ ವರದಿಯನ್ನು ತಯಾರಿಸಲಾಗಿದೆ.
ತಂಬಾಕುರಹಿತ ಉತ್ಪನ್ನಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಡೆಸಲಾದ 37 ಅಧ್ಯಯನಗಳನ್ನು ಈ ವರದಿಯು ವಿಶ್ಲೇಷಿಸಿದೆ. ಜಗಿಯುವ,ಮೂಗಿನ ಮೂಲಕ ಎಳೆದುಕೊಳ್ಳುವ ಅಥವಾ ಹಲ್ಲು ಅಥವಾ ಒಸಡುಗಳಿಗೆ ಲೇಪಿಸುವ ಅಥವಾ ಪಾನೀಯವಾಗಿ ಸೇವಿಸುವ ತಂಬಾಕು ಉತ್ಪನ್ನಗಳಿಂದ ಬಾಯಿಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳ ಬಗ್ಗೆ ವರದಿಯು ವಿಶ್ಲೇಷಿಸಿದೆ.
ಧೂಮಪಾನ ಕಡಿತಗೊಳಿಸುವಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದರೂ, ಹೊಗೆರಹಿತ ತಂಬಾಕು ಉತ್ಪನ್ನಗಳಿಗೆ ಭಾರತೀಯ ಸಮಾಜದಲ್ಲಿರುವ ಮಾನ್ಯತೆ ಹಾಗೂ ಅಗ್ಗದ ದರದಲ್ಲಿ ಲಭ್ಯವಾಗುತ್ತಿರುವುದು ಅವುಗಳ ಬಳಕೆಯನ್ನು ನಿಯಂತ್ರಿಸಲು ಇರುವ ಅತಿ ದೊಡ್ಡ ಅಡೆತಡೆಗಳಾಗಿವೆ.
ಹೊಗೆರಹಿತ ತಂಬಾಕು ಉತ್ಪನ್ನಗಳಿಗೂ, ಬಾಯಿ ಕ್ಯಾನ್ಸರ್‌ಗೂ ನಡುವೆ ಇರುವ ನಂಟಿನ ಬಗ್ಗೆ ನಡೆಸಲಾದ ಈ ಅಧ್ಯಯನ ವರದಿಯಲ್ಲಿ ಅಮೆರಿಕ ಸ್ವೀಡನ್ ಹಾಗೂ ಭಾರತವನ್ನು ಒಳಪಡಿಸಲಾಗಿತ್ತು. ಭಾರತದ ಹೊಗೆರಹಿತ ತಂಬಾಕು ಉತ್ಪನ್ನಗಳ ಕುರಿತ ವರದಿಯನ್ನು ಹೊರತುಪಡಿಸಿದಾಗ, ಅಮೆರಿಕ ಹಾಗೂ ಸ್ವೀಡನ್‌ಗಳ ಕುರಿತ ಅಧ್ಯಯನ ವರದಿಯಲ್ಲಿ ಆ ದೇಶಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳ ಕ್ಯಾನ್ಸರ್‌ಕಾರಕತ್ವ ಗಣನೀಯವಾಗಿ ಕಂಡುಬರಲಿಲ್ಲ. ಅದೇ ರೀತಿ ಯುರೋಪಿಯನ್ ರಾಷ್ಟ್ರಗಳಲ್ಲಿನ ಹೊಗೆರಹಿತ ತಂಬಾಕು ಉತ್ಪನ್ನಗಳ ಕ್ಯಾನ್ಸರ್‌ಕಾರತ್ವವು ಅತ್ಯಂತ ನಗಣ್ಯ ಪ್ರಮಾಣದಲ್ಲಿರುವುದನ್ನು ಅಧ್ಯಯನ ವರದಿ ಕಂಡುಕೊಂಡಿದೆ.







