ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ: ಅಕ್ರಮಗಳಿಗೆ ಕಡಿವಾಣ ಹಾಕಲು ಆಗ್ರಹ
ಬೆಂಗಳೂರು, ಜೂ.1: ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಮುಖಂಡರಾದ ಕೆ.ಎಸ್.ಲಕ್ಷ್ಮಿ, ಮುಕ್ತ ಮತ್ತು ನ್ಯಾಯಸಮ್ಮತ ಆಶಯಗಳನ್ನು ಹೊಂದಿರುವ ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಗಂಭೀರವಾದ ಲೋಪ ದೋಷಗಳು, ದೌರ್ಬಲ್ಯಗಳು ಕಂಡು ಬರುತ್ತಿದ್ದು, ಒಟ್ಟಾರೆಯಾಗಿ ಚುನಾವಣಾ ಪ್ರಕ್ರಿಯೆಯನ್ನು ದುರ್ಬಲ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಅಪ್ರಜಾಸತ್ತಾತ್ಮಕ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ಕೂಡಲೇ ರಾಜ್ಯ ಚುನಾವಾಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಬೆಂಗಳೂರು ಪದವೀಧರರನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ನೀಡಿದ್ದ ಫೋನ್ ನಂಬರ್‌ಗಳು ಕಾನೂನು ಪ್ರಕಾರ ಗೌಪ್ಯವಾಗಿಡಬೇಕು. ಆದರೆ, ಅದು ಸೋರಿಕೆಯಾಗಿದ್ದು, ಅದನ್ನು ರಾಜಾರೋಷವಾಗಿ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಕೆಲ ಖಾಸಗಿ ಸಂಸ್ಥೆಗಳು ತಮ್ಮ ಬಳಿ 65,354 ಮತದಾರರ ಮೊಬೈಲ್ ಸಂಖ್ಯೆಗಳು ಇರುವುದಾಗಿ ಸಾರ್ವಜನಿಕವಾಗಿ ಅವರ ವಿಳಾಸ ಮತ್ತು ಪೋನ್ ನಂಬರ್ ನೀಡಿ ಪ್ರಚಾರದ ಜಾಹೀರಾತು ನೀಡುತ್ತಿವೆ. ಇದು ಇಲಾಖೆಯಲ್ಲಿನ ಸೋರಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿ, ಕೂಡಲೇ ಇಲಾಖೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮೇ 22 ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು, ಮೇ 23 ರಂದು ಪರಿಶೀಲನೆ ಮಾಡಿ, ಮೇ 25 ರಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಅನಂತರ ಅಭ್ಯರ್ಥಿಗಳ ಪಟ್ಟಿ ಮತ್ತು ಸೀರಿಯಲ್ ನಂಬರ್ ನೀಡುವುದಾಗಿ ಹೇಳಿ ಮೂರು ದಿನ ಕಳೆದರೂ ನೀಡಿಲ್ಲ. ಎಲ್ಲರಿಗೂ ನಮೂನೆ 7ಬಿ ನೀಡಿದ್ದರೂ, ಅದು ಸಿಇಒ ಕಚೇರಿಯಿಂದ ಅನುಮೋದನೆಯಾಗಬೇಕು ಎಂದು ಮೂರು ದಿನ ಅಭ್ಯರ್ಥಿಗಳನ್ನು ಗೊಂದಲಮಯ ಮಾಡಿದ್ದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂತಿಮಗೊಳಿಸಿರುವ ಪದವೀಧರ ಮತದಾರರ ಪಟ್ಟಿ ಮುದ್ರಣಕ್ಕೆ ಸಿದ್ಧವಿದ್ದರೂ, ವಿನಾಕಾರಣ ಮೂರು ದಿನಗಳ ಕಾಲ ಪಟ್ಟಿ ನೀಡದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ಅಲ್ಲದೆ, ಮುದ್ರಣಗೊಂಡ ಪಟ್ಟಿಯ 36 ಭಾಗಗಳ ಪ್ರತಿಗಳನ್ನು ಎಣಿಸಲಾಗದೆ, ಅದಕ್ಕೆ ತಗಲುವ ವೆಚ್ಚ ಅಂದಾಜಿಸದೆ, ಸ್ವತಂತ್ರ ಅಭ್ಯರ್ಥಿಗಳು ವಿಪರೀತ ಗೊಂದಲಕ್ಕೀಡಾಗಿದ್ದರು. ಮತ್ತೊಂದು ಕಡೆ ಪ್ರಚಾರದಲ್ಲೂ ತೊಡಗಿಸಿಕೊಳ್ಳದಂತೆ ಮಾಡಲಾಗಿತ್ತು ಎಂದು ಅವರು ದೂರಿದರು.
ಮತದಾನದಲ್ಲಿ ಪಾಲ್ಗೊಳ್ಳುವ ಕೇಂದ್ರ, ರಾಜ್ಯ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಪದವೀಧರರಿಗೆ ಜೂ.8 ರಂದು ರಜೆ ನೀಡಬೇಕು. ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿಪಡಿಸುವ ಸಲುವಾಗಿ ಆಯೋಗವು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾದ ಸಂಪತ್‌ರಾಮಾನುಜಮ್, ಡಾ.ಸುಬ್ರಮಣ್ಯಸ್ವಾಮಿ, ಎಂ.ವರದರಾಜು, ಆಂಜನಮೂರ್ತಿ, ಸಿ.ಅಶ್ವತ್ಥ್‌ನಾರಾಯಣ ಉಪಸ್ಥಿತರಿದ್ದರು.







