ಭಾರತೀಯ ಚಳವಳಿಗಳು ಸಾಮಾಜಿಕವಾಗಿ ಉಳಿದಿಲ್ಲ: ಚೊಕ್ಕಾಡಿ

ಉಡುಪಿ, ಜೂ.2: ಕಮ್ಯುನಿಸ್ಟ್ ಚಳವಳಿ ಹೊರತು ಪಡಿಸಿದಂತೆ ಭಾರತದ ಯಾವುದೇ ಸಾಮಾಜಿಕ ಚಳವಳಿಗಳು ಕೂಡ ಇಂದು ಸಾಮಾಜಿಕ ಚಳವಳಿ ಗಳಾಗಿ ಉಳಿದಿಲ್ಲ. ಬದಲಿಗೆ ಅವು ರಾಜಕೀಯ ಪಕ್ಷಗಳ ಮೂಲಕ ಬೆಳಕನ್ನು ನಿರೀಕ್ಷಿಸುವ ರೂಪದಲ್ಲಿ ಇದೆ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.
ಲೇಖಕ ರಾಜಗೋಪಾಲ ಎಂ. ಹಿರಿಯಡಕ ಅವರ ಗಾಂಧೀಜಿಯ ರೂಪಕ ಗಳು ಹಾಗೂ ತಾವ್ರೊ- ಪರತತ್ವದ ಅನುಸಂಧಾನ ಮತ್ತು ಶ್ರೀರಾಮ ದಿವಾಣ ಅವರ ವ್ಯವಸ್ಥೆಯೆಂಬ ಅವ್ಯವಸ್ಥೆ ಕೃತಿಗಳನ್ನು ಶನಿವಾರ ಉಡುಪಿ ಟಿ.ಎ.ಪೈ ಹಿಂದಿ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಚಳವಳಿಗಳಲ್ಲಿ ಸಾಮಾಜಿಕತೆಯ ಬದಲು ರಾಜಕೀಯಾತ್ಮಕ ಅಂಶಗಳನ್ನು ಹೆಚ್ಚು ತೆಗೆದುಕೊಳ್ಳಲಾಗುತ್ತಿದೆ. ಇದು ಸಾಮಾಜಿಕ ಅಂಶವಾಗಿ ಪರಿವರ್ತನೆ ಯಾದಾಗ ಮಾತ್ರ ಚಳವಳಿಗಳು ಸಮಾಜವನ್ನು ಹೆಚ್ಚು ಎಚ್ಚರ, ಶಿಕ್ಷಿತವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಇಡೀ ಭಾರತದಲ್ಲಿ ಕೇವಲ ಒಂದು ಸಿದ್ಧಾಂತ ಇಟ್ಟುಕೊಂಡು ಯಾವುದೇ ಚಳವಳಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಭಾರತದಲ್ಲಿ ಪ್ರಾದೇಶಿಕವಾಗಿ ಸಾಕಷ್ಟು ಬದಲಾವಣೆಗಳಿವೆ. ಆದುದರಿಂದ ಆಯಾ ಪ್ರದೇಶಗಳ ಸ್ಥಿತಿಗತಿಗಳಿಗೆ ಹೊಂದಿಕೊಂಡು ಸಾಮಾಜಿಕ ಚಳವಳಿಗಳು ತಮ್ಮ ಚಿಂತನೆಗಳನ್ನು ಮೂಡಿಸ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಭಾರತದ ಸನ್ನಿವೇಶದಲ್ಲಿ ಸ್ಥಳೀಯತೆ ಎಂಬುದು ಬಹಳ ಮುಖ್ಯವಾದುದು. ಹೋರಾಟ, ವೈಚಾರಿಕತೆ, ನೃತ್ಯ, ಸಂಗೀತ, ನಾಟಕ ಸೇರಿದಂತೆ ಸಾಂಸ್ಕೃತಿಕ ಅಂಶಗಳಲ್ಲಿಯೂ ಸ್ಥಳೀಯತೆ ಎಂಬುದು ಅಗತ್ಯ. ಸುಧಾರಣೆಗಳು ಇದೇ ನೆಲ ಗಟ್ಟಿನಲ್ಲಿ ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಉಡುಪಿಯ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಲೇಖಕ ಶ್ರೀರಾಮ ದಿವಾಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು.







