ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಜೂ.2: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಸೀಟು ಪಡೆದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಮತ್ತು ಪೋಷಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪೀಣ್ಯ 2 ನೆ ಹಂತದ ಕೃಷ್ಣ, ಕಿರಣ್, ಚೈತನ್ಯ ಹಾಗೂ ವ್ಯಾಸ ಇಂಟರ್ ನ್ಯಾಷನಲ್ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಿಸಿಲಿನಲ್ಲಿಯೇ ಬೆಳಗ್ಗೆಯಿಂದ ವಿದ್ಯಾರ್ಥಿ ಮತ್ತು ಪೋಷಕರು ವಿಧಾನಸೌಧ ಗೇಟಿನ ಮುಂಭಾಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವಂತೆ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಕ್ಕಳು ಹಾಗೂ ಪೋಷಕರನ್ನು ಚದುರಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಕ್ರಮಗಳು ಮಿತಿ ಮೀರಿದ್ದು, ಅನಗತ್ಯವಾಗಿ ಪೋಷಕರಿಗೆ ತೊಂದರೆ ನೀಡಲಾಗುತ್ತಿದೆ. ಅಲ್ಲದೆ, ಹಣ ವಸೂಲಿ ಮಾಡುತ್ತಿದ್ದನ್ನು ಪ್ರಶ್ನಿಸಿದ್ದ ಕಾರಣದಿಂದಾಗಿ, ಯಾವುದೇ ದಾಖಲೆಗಳಿಲ್ಲದಿದ್ದರೂ, ಸುಮಾರು 300 ಕ್ಕೂ ಅಧಿಕ ಕೇಸ್‌ಗಳನ್ನು ಪೋಷಕರ ಮೇಲೆ ಶಾಲಾ ಆಡಳಿತ ಮಂಡಳಿ ದಾಖಲಿಸಿದೆ. ಹಣ ವಸೂಲಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆಯಲ್ಲಿದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಭೇಟಿ: ಪ್ರತಿಭಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಕ್ಕಳ ಸಮಸ್ಯೆ ಏನೇ ಇದ್ದರೂ ತಕ್ಷಣ ಬಗೆಹರಿಸುತ್ತೇನೆ. ಆರ್‌ಟಿಇ ಮಕ್ಕಳ ಹಲವಾರು ಸಮಸ್ಯೆಗಳಿವೆ. ಅದನ್ನು ಶೀಘ್ರದಲ್ಲಿ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಆರ್‌ಟಿಐ ಅಡಿಯಲ್ಲಿ ಹಲವಾರು ಬಡ ಮಕ್ಕಳಿಗೆ ಅನನುಕೂಲವಾಗುತ್ತಿದೆ. ಸರಕಾರ ರಚನೆಯಾಗಿ ಒಂದು ವಾರ ಕಳೆದಿದೆ. ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ತರಬೇಕು ಎಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮಕ್ಕಳಿಗೆ ಅನುಕೂಲವಾಗುವಂತೆ ಕಾನೂನು ಜಾರಿ ಮಾಡಲಾಗುತ್ತದೆ ಎಂದರು.
ಸೋಮವಾರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಅಲ್ಲಿನ ಬಿಇಒಗೆ ತಕ್ಷಣ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಹೇಳಿದ್ದೇನೆ. ಒಂದು ವೇಳೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಕ್ರಮ ಕೈಗೊಳ್ಳಲಿಲ್ಲ ಎಂದರೆ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌ಡಿಕೆ ಎಚ್ಚರಿಕೆ ನೀಡಿದರು.







