ಹನೂರು: ಮಳೆಗೆ ಕೊಚ್ಚಿ ಹೋದ ಕಿರು ಸೇತುವೆ

ಹನೂರು,ಜೂ.02: ಪಟ್ಟಣದ ದಲಿತ ಸಮುದಾಯದವರು ರುಧ್ರಭೂಮಿಗೆ (ಸ್ಮಶಾನ) ತೆರಳುವ ಮಾರ್ಗ ಮಧ್ಯ ಇರುವ ಸ್ವಾಮಿಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಕಳೆದ ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋಗಿದ್ದು, ಈ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಗುಂಡಿ ಬಿದ್ದ ಪರಿಣಾಮ ಸ್ಮಶಾನಕ್ಕೆ ಮೃತ ದೇಹವನ್ನು ಬೇರೆ ಮಾರ್ಗವಾಗಿ ಹೊತ್ತು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವರ್ಷಗಳ ಹಿಂದೆ ಇಲ್ಲಿ ಸೇತುವೆ ನಿರ್ಮಿಸುವಂತೆ ಮಾಡಿದ್ದ ಮನವಿಗೆ ಸ್ಪಂದಿಸಿದ್ದ ಜನಪ್ರತಿನಿಧಿಗಳು ಮಲೆನಾಡು ಪ್ರದೇಶಾಭಿವೃದ್ದಿ ಯೋಜನೆಯಡಿ 5 ಲಕ್ಷ ಮತ್ತು ಶಾಸಕರು ಸಂಸದರ ಅನುದಾನದಡಿ 15 ಲಕ್ಷ ರೂ ಒಟ್ಟು 20 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಸೇತುವೆ ಕಾಮಾಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ವರ್ಷ ಕಳೆದರೂ ಕಾಮಾಗಾರಿ ಆರಂಭವಾಗಿರಲಿಲ್ಲ. ಕೊನೆಗೆ ಮುಖಂಡರ ಒತ್ತಾಯದ ಮೇರೆಗೆ ಕಾಮಗಾರಿ ಪ್ರಾರಂಭಿಸಿ, ತರಾತುರಿಯಲ್ಲಿ ಕೆಲಸ ನಿರ್ವಹಿಸಿದ ಕಾರಣದಿಂದಾಗಿ ಕಳೆದ ವಾರ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿಹೋಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಗಮನ ಹರಿಸಿ ತುರ್ತು ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.





