ಮೈಸೂರು: ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ

ಮೈಸೂರು,ಜೂ.2: ಧಾರಾಕಾರವಾಗಿ ಸುರಿದ ಮಳೆಗೆ ಸಾಂಸ್ಕೃತಿಕ ನಗರಿಯಲ್ಲಿ ಮನೆಗಳಿಗೆ ನೀರು ನುಗ್ಗಿ, ರಸ್ತೆಯಲ್ಲಾ ಜಲಾವೃತಗೊಂಡು ಜನಜೀವನ ಅಸ್ಥವ್ಯಸ್ಥಗೊಂಡ ಘಟನೆ ನಡೆಯಿತು.
ಶನಿವಾರ ಸಂಜೆ 4.45 ಗಂಟೆಗೆ ಶುರುವಾದ ಮಳೆ, ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಗುಡುಗು-ಸಿಡಿಲು ಸಹಿತ ಸುರಿಯಿತು. ಇದರಿಂದ ನಗರದ ಪ್ರಮುಖ ರಸ್ತೆಗಳಾದ ಅಶೋಕ ರಸ್ತೆ, ಬೆಂಗಳೂರು- ಮೈಸೂರು ರಸ್ತೆ, ರಾಮಾನುಜ ರಸ್ತೆ, ಅಗ್ರಹಾರ ವೃತ್ತ, ಮರಿಮಲ್ಲಪ್ಪ ಕಾಲೇಜು ರಸ್ತೆ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡವು. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ತೇಲಿ ಹೋದವು.
ಒಂದೇ ಮಳೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಇದ್ದ ರಾಜ ಕಾಲುವೆಗಳು ಮುಚ್ಚಿಹೋಗಿ ರಸ್ತೆಯ ಮೇಲೆಲ್ಲಾ ನೀರು ಹರಿಯುವಂತಾಯಿತು. ರಸ್ತೆಯ ಮಧ್ಯಭಾಗದಲ್ಲಿ ಹಳ್ಳಬಿದ್ದಿದ್ದರಿಂದ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು.
ಮಳೆ ಬರುವ ಲಕ್ಷಣಗಳು ಇದ್ದರೂ ಪಾಲಿಕೆಯವರು ಮುಂಜಾಗ್ರತೆ ವಹಿಸಿಲ್ಲ ಎಂದು ಕೆಲವರು ಹಿಡಿಶಾಪ ಹಾಕುತ್ತಿದ್ದರು. ಮಳೆ ಸುರಿದ ಕಾರಣ ರಸ್ತೆಯಲ್ಲೆಲ್ಲಾ ನೀರು ತುಂಬಿಕೊಂಡಿದ್ದರಿಂದ ವಾಹನ ದಟ್ಟಣೆ ಉಂಟಾಗಿ ಸವಾರರು ತೊಂದರೆ ಅನುಭವಿಸುವಂತಾಯಿತು.
ಮನೆಗಳಿಗೆ ನುಗ್ಗಿದ ನೀರು: ರಾಮಾನುಜ ರಸ್ತೆಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನುಗ್ಗಿದ ಪರಿಣಾಮ ಜಲಾವೃತಗೊಂಡು ಮಾಲಿಕರು ಮನೆಯಿಂದ ನೀರನ್ನು ಹೊರ ತಳ್ಳಲು ಹರಸಾಹಸ ಪಡಬೇಕಾಯಿತು.
ನಗರಪಾಲಿಕೆಗೆ ಹಲವಾರು ಬಾರಿ ಮನವಿ ನೀಡಿ ಮಳೆ ನೀರು ಚರಂಡಿಯಲ್ಲಿ ಹರಿದುಹೋಗುವಂತೆ ವ್ಯವಸ್ಥೆಗೊಳಿಸಿ ಎಂದರೂ ಪಾಲಿಕೆ ಇತ್ತ ಗಮನ ಹರಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿ ಸ್ಥಳೀಯ ಪಾಲಿಕೆ ಸದಸ್ಯ ಸುನೀಲ್ ಪರಿಶೀಲನೆ ನಡೆಸಿದರು.







