ಇಸ್ರೇಲ್ ಗುಂಡಿಗೆ ಗಾಯಾಳುಗಳ ಶುಶ್ರೂಷೆ ಮಾಡುತ್ತಿದ್ದ ನರ್ಸ್ ಬಲಿ
ಫೆಲೆಸ್ತೀನ್: ನೂರಾರು ಪ್ರತಿಭಟನಾಕಾರರಿಗೆ ಗಾಯ

ಜೆರುಸಲೇಂ, ಜೂ. 2: ಗಾಝಾ ಪಟ್ಟಿಯಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಫೆಲೆಸ್ತೀನ್ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಈಗ ಇಸ್ರೇಲ್‌ನಲ್ಲಿರುವ ತಮ್ಮ ಮನೆಗಳಿಗೆ ಮರಳಲು ಫೆಲೆಸ್ತೀನಿಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಫೆಲೆಸ್ತೀನಿಯರು ನಡೆಸುತ್ತಿರುವ ಸರಣಿ ಪ್ರತಿಭಟನೆಯ 10ನೇ ವಾರದಂದು ಪೂರ್ವ ಗಾಝಾ ಪಟ್ಟಿಯಲ್ಲಿರುವ ಇಸ್ರೇಲ್ ಗಡಿಯಲ್ಲಿ ಸಾವಿರಾರು ಫೆಲೆಸ್ತೀನಿಯರು ಜಮಾಯಿಸಿದ್ದರು.
21 ವರ್ಷದ ರಝನ್ ನಜ್ಜರ್‌ರ ಎದೆಗೆ ಗುಂಡು ತಗಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರು ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ನಜ್ಜರ್ ವೈದ್ಯಕೀಯ ಸ್ವಯಂಸೇವಕಿಯಾಗಿದ್ದು, ವಾರಕ್ಕೊಮ್ಮೆ ನಡೆಯುವ ಪ್ರತಿಭಟನೆಗಳ ಸಂದರ್ಭದಲ್ಲಿ ಗಾಯಗೊಳ್ಳುವ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡುತ್ತಿದ್ದರು.
ಗಡಿ ಬೇಲಿ ಸಮೀಪದ ಐದು ಡೇರೆ ಶಿಬಿರಗಳಲ್ಲಿ ಪ್ರತಿಭಟನಾಕಾರರು ನೆರೆದಿದ್ದರು. ಹತ್ತಾರು ಯುವಕರು ಟಯರ್‌ಗಳನ್ನು ಉರಿಸುತ್ತಾ, ಸೈನಿಕರ ಮೇಲೆ ಕಲ್ಲುಗಳನ್ನು ತೂರುತ್ತಾ ಗಡಿ ಸಮೀಪಿಸಿದಾಗ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದು ಇಸ್ರೇಲ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.







