ಡಿ.ಕೆ.ಶಿ ಆಪ್ತರ ಮನೆ ಮೇಲಿನ ಸಿಬಿಐ ದಾಳಿಯ ಹಿಂದೆ ಕೇಂದ್ರದ ಪಾತ್ರವಿಲ್ಲ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜೂ. 2: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್‍ರವರ ನಿಕಟವರ್ತಿಗಳ ಮೇಲೆ ಇತ್ತೀಚೆಗೆ ನಡೆದ ಸಿಬಿಐ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಕಾಂಗ್ರೆಸ್ ಮುಖಂಡರು ವಿನಾ ಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದಾಗಿದ್ದು, ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆ ಸಿಬಿಐ, ಐಟಿ, ಇಡಿ ದಾಳಿಗಳು ನಡೆದಿದ್ದವು. ಹಾಗಾದರೆ ಈ ದಾಳಿಗಳ ಹಿಂದೆ ಯುಪಿಎ ಸರ್ಕಾರದ ಕೈವಾಡವಿತ್ತೆ? ಎಂದು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನಿಸಿರುವ ಅವರು, ಕಳಂಕಿತರು ದಾಳಿಗಳಿಗೆ ಹೆದರುತ್ತಾರೆ. ಪ್ರಾಮಾಣಿಕರು ಏಕೆ ಹೆದರಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಜನಾದೇಶಕ್ಕೆ ವಿರುದ್ದವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿವೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಆದಷ್ಟು ಶೀಘ್ರವಾಗಿ ಪತನಗೊಳ್ಳಲಿದೆ ಎಂದರು.
ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಾಗುತ್ತಿರುವ ವಿಳಂಬವನ್ನು ಗಮನಿಸಿದರೆ, ಎರಡೂ ಪಕ್ಷಗಳಲ್ಲಿ ಗೊಂದಲವಿರುವುದು ನಿಜವಾಗಿದೆ. ಅಸಮಾಧಾನ ಸ್ಫೋಟದ ಹಿನ್ನೆಲೆಯಲ್ಲಿಯೇ ಸಂಪುಟ ವಿಸ್ತರಣೆಯಾಗುತ್ತಿಲ್ಲ ಎಂದಿದ್ದಾರೆ.
ಪೇಜಾವರ ಶ್ರೀಗಳು ನಿನ್ನೆ ತಮ್ಮ ಮನೆಯಲ್ಲಿ ಉಳಿದಿಕೊಂಡಿದ್ದು ಸಂತಸ ತಂದಿದೆ. ಪೇಜಾವರ ಶ್ರೀಗಳು ಮತ್ತು ನನ್ನ ನಡುವಿನ ಸಂಬಂಧ ಕನಕದಾಸರ ಮತ್ತು ಶ್ರೀಕೃಷ್ಣ ನಡುವಿನ ಸಂಬಂಧವಿದ್ದ ಹಾಗಿದೆ ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.







