ಮಂಡ್ಯ: ವಿದ್ಯುತ್ ತಂತಿಗೆ ಜೋತು ಬಿದ್ದಿರುವ ಮರದ ಟೊಂಗೆ; ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಮಂಡ್ಯ, ಜೂ.2: ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ವಿದ್ಯುತ್ ಅವಘಡದಿಂದ ಜೀವಹಾನಿ ಮತ್ತು ಲಕ್ಷಾಂತರ ರೂ.ಗಳ ನಷ್ಟ ಸಂಭವಿಸುವುದನ್ನು ತಪ್ಪಿಸಿ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಗ್ರಾಮದ ಪರಿಶಿಷ್ಠ ಕಾಲನಿಯಲ್ಲಿ ಆಲದಮರದ ಟೊಂಗೆಯು 12 ಕೆ.ವಿ. ವಿದ್ಯುತ್ ಸರಬರಾಜಾಗುವ ವಿದ್ಯುತ್ ತಂತಿಗೆ ಜೋತು ಬಿದ್ದು, ಮಳೆಗಾಳಿ, ಬಿರುಗಾಳಿಗೆ ಬೀಳುವ ಹಂತದಲ್ಲಿದೆ. ಮರ ತಂತಿಗೆ ತಾಕಿದಾಗ ಬೆಂಕಿ ಕಾಣಿಸಿಕೊಂಡು ಜನರು ಆತಂಕದಲ್ಲಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಎಂ.ಪಿ.ಸಿದ್ದಯ್ಯ ಎಂಬುವರು ಕಿಡಿಕಾರಿದ್ದಾರೆ.
ವಿದ್ಯುತ್ ತಂತಿ ಸಾಗಿರುವ ರಸ್ತೆಯಲ್ಲಿ ಸಾರ್ವನಿಕರು ತಿರುಗಾಡುತ್ತಾರೆ, ಮಕ್ಕಳು ಆಟವಾಡುತ್ತಾರೆ, ಸಾಕುಪಾಣಿಗಳನ್ನು ಕಟ್ಟಿ ಹಾಕಿರುತ್ತಾರೆ. ಆಕಸ್ಮಿಕವಾಗಿ ಬಿರುಗಾಳಿಗೆ ಮರ ತಂತಿ ಮೇಲೆ ಮುರಿದು ಬಿದ್ದರೆ ಸುಮಾರು 12 ವಿದ್ಯುತ್ ಕಂಬಗಳು ಮುರಿದು ಬೀಳುವುದರೊಂದಿಗೆ 12 ಕೆ.ವಿ. ವಿದ್ಯುತ್ ಅವಘಡಕ್ಕೆ ಜೀವಗಳು ಸುಟ್ಟು ಹೋಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಸ್ಕ್ ಅಧೀಕ್ಷಕ ಅಭಿಯಂತರರಿಗೂ ದೂರು ನೀಡಿ 10 ದಿನಗಳ ಕಳೆದರೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಕ್ರಮ ಕೈಗೊಂಡು ಅವಘಡ ತಪ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.







