ಮಂಡ್ಯ: ಪಾಂಡವಪುರದಲ್ಲಿ ವರುಣನ ಆರ್ಭಟ; ರಸ್ತೆಗುರುಳಿದ ಮರಗಳು

ಮಂಡ್ಯ, ಜೂ.2: ಗುಡುಗು, ಮಿಂಚಿನೊಂದಿಗೆ ವರುಣ ಆರ್ಭಟಿಸಿದ್ದರಿಂದ ಮರಗಳು ಉರುಳಿ ಬಿದ್ದ ಪರಿಣಾಮ ಶನಿವಾರ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಬಳಿ ಮೈಸೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಧ್ಯಾಹ್ನ 3.30ಕ್ಕೆ ಗುಡುಗು, ಮಿಂಚಿನೊಂದಿಗೆ ಶುರುವಾಗಿ ಸುಮಾರು ಒಂದುವರೆ ತಾಸಿಗೂ ಹೆಚ್ಚು ಕಾಲ ಮಳೆ ಸುರಿಯಿತು. ಈ ವೇಳೆ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಬಳಿ ಮೈಸೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಸಹಾಯದೊಂದಿಗೆ ಎರಡು ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲಿವರೆಗೆ ಮೈಸೂರು ಮತ್ತು ಶಿವಮೊಗ್ಗ ಕಡೆಗಳಿಂದ ಬಂದಂತಹ ವಾಹನಗಳು ಶಂಭೂನಹಳ್ಳಿ-ಪಾಂಡವಪುರ ಮಾರ್ಗವಾಗಿ ಸಂಚರಿಸಿದವು.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದ್ದಾರೆ.







