ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಗತ್ಯ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್
"ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ದ್ವೇಷ ರಾಜಕಾರಣ ಬೇಡ"

ಚಿಮಗಳೂರು, ಜೂ.2: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ರಚನೆ ಮಾಡುವುದು ಅತ್ಯಗತ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಅಭಿಪ್ರಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಜೆಡಿಎಸ್ ಒಂದು ಸ್ಥಾನದಲ್ಲೂ ಗೆಲುವು ಕಂಡಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲಿಷ್ಟ ಸಂಘಟನೆಗಾಗಿ ವರಿಷ್ಠರು ಅಗತ್ಯ ಕ್ರಮಕೈಗೊಂಡಿದ್ದಾರೆ. ಮಾಜಿ ಶಾಸಕ ಧರ್ಮೇಗೌಡ ಅವರಿಗೆ ಸಿಎಂ ಕುಮಾರಸ್ವಾಮಿ ಎಮ್ಮೆಲ್ಸಿಯನ್ನಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿದ್ದಾರೆ. ಧರ್ಮೇಗೌಡ ಅವರು ಎಮ್ಮೆಲ್ಸಿಯಾಗಿ ಸಚಿವರಾಗುವ ಸಂಭವ ಹೆಚ್ಚಿದ್ದು, ಜಿಲ್ಲಾ ಮಂತ್ರಿಯಾದರೂ ಆಶ್ಚರ್ಯ ಪಡಬೇಕಿಲ್ಲ. ಹೀಗಾದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಹೊಸ ಶಕ್ತಿ ಲಭ್ಯವಾಗಲಿದೆ. ಇದು ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದ ಅವರು, ಜೆಡಿಎಸ್‍ಗೆ ಅಧಿಕಾರ ಸಿಕ್ಕಿರುವ ಸಂದರ್ಭದಲ್ಲಿ ಐದು ಕ್ಷೇತ್ರ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ವಿರೋಧಿ ಪಕ್ಷದವರೊಂದಿಗೆ ದ್ವೇಷ ಸಾಧನೆಗೆ ಮುಂದಾಗಬಾರದು. ಪರಸ್ಪರ ಸೌಹಾರ್ದದ ಮೂಲಕ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕೆಂದರು ಕರೆ ನೀಡಿದರು.
ಕಡೂರು ಕ್ಷೇತ್ರದಲ್ಲಿ ಮಾಜಿ ಶಾಸಕ ವೈಎಸ್‍ವಿ ದತ್ತ ಬೆಂಬಲಿಗರು ಧರ್ಮೇಗೌಡ ಅವರೇ ದತ್ತ ಸೋಲಿಗೆ ಕಾರಣ. ಧರ್ಮೇಗೌಡ ಅವರಿಗೆ ಎಮ್ಮೆಲ್ಸಿ ಸ್ಥಾನ ನೀಡಬಾರದೆಂದು ಮಾಜಿ ಪ್ರಧಾನಿ ದೇವೇಗೌಡರ ಮನೆ ಮುಂದೆ ಧರಣಿ ಮಾಡಿರುವುದು ಸರಿಯಲ್ಲ ಎಂದ ಅವರು, ದತ್ತ ಅವರ ಸೋಲಿಗೆ ಧರ್ಮೇಗೌಡ ಕಾರಣರಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲೂ ಸೋತಿದೆ. ದತ್ತ ಅವರೂ ಭಾರಿ ಮತಗಳ ಅಂತರದಿಂದ ಸೋತಿದ್ದಾರೆ. ವಾಸ್ತವ ಹೀಗಿರುವಾಗ ಧರ್ಮೇಗೌಡ ದತ್ತ ಅವರ ಸೋಲಿಗೆ ಕಾರಣ ಎಂಬುದು ಸುಳ್ಳು. ದತ್ತ ಅವರು ಪಕ್ಷಕ್ಕೆ ನೀಡಿರುವ ಕೊಡುಗೆ ಅಪಾರ, ಹಾಗೆಯೇ ಧರ್ಮೇಗೌಡ ಅವರೂ ಮೂರು ಬಾರಿ ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ಇವರಲ್ಲಿ ಯಾರಿಗೆ ಎಮ್ಮೆಲ್ಸಿ ಸ್ಥಾನ ಕೊಟ್ಟರೂ ನಮ್ಮ ಅಭ್ಯಂತರವಿಲ್ಲ. ಒಟ್ಟಿನಲ್ಲಿ ಇಬ್ಬರಿಗೂ ಸರಕಾರದಲ್ಲಿ ಉತ್ತಮ ಸ್ಥಾನ ನೀಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಅಗತ್ಯ ಕ್ರಮವಹಿಸಬೇಕೆಂದರು.
ಪಕ್ಷದೊಳಗೆ ಗುಂಪುಗಾರಿಕೆ ಸರಿಯಲ್ಲ. ಜೆಡಿಎಸ್‍ಗೆ ಅಧಿಕಾರ ಸಿಕ್ಕಿರುವುದನ್ನು ಸದುಪಯೋಗ ಪಡಿಸಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಪಕ್ಷದೊಳಗೆ ಪರಸ್ಪರ ಕಚ್ಚಾಡುವುದರಿಂದ ವಿರೋಧಿಗಳಿಗೆ ಲಾಭವಾಗಲಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದೊಳಗೆ ಆಂತರಿಕ ಸಮನ್ವಯ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆ. ಅಲ್ಲದೇ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನೊಳಗೊಂಡ ಸಮನ್ವಯ ಸಮಿತಿಯನ್ನೂ ರಚಿಸಬೇಕಾಗಿದೆ. ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಅಸಮಾದಾನದ ಬಗ್ಗೆ ರವಿವಾರ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಇದೇ ವೇಳೆ ತಿಳಿಸಿದ ದೇವರಾಜ್, ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಜವಬ್ದಾರಿಯನ್ನು ಮಾಜಿ ಶಾಸಕರಾದ ವೈಎಸ್‍ವಿ ದತ್ತ, ಬಿ.ಬಿ.ನಿಂಗಯ್ಯ, ಭೋಜೇಗೌಡ, ಧರ್ಮೇಗೌಡ ಅವರೇ ನಿರ್ವಹಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ರಮೇಶ್, ಗಿರೀಶ್, ದೇವರಾಜ್, ಲಕ್ಷ್ಮಣ್, ಮಾನು, ದೇವಿಕುಮಾರ್, ಅರಸ್ ಉಪಸ್ಥಿತರಿದ್ದರು.
ರಾಷ್ಟ್ರವ್ಯಾಪ್ತಿ ಗ್ರಾಮೀಣ ಅಂಚೆ ನೌಕರರು ಕಳೆದ 10 ದಿನಗಳಿಂದ ಕಮಲೇಶ್ಚಂದ್ರ ವರದಿ ಜಾರಿಗೆ ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಇವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಶುಕ್ರವಾರ ನೌಕರರರು ನಗರದಲ್ಲಿ ಕಡಲೇಕಾಯಿ, ಕಾಫಿ, ಟಿ ಮಾರಾಟ ಮಾಡಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಇವರ ಬೇಡಿಕೆಗೆ ಕೂಡಲೆ ಸ್ಪಂದಿಸದಿದ್ದಲ್ಲಿ ಜೆಡಿಎಸ್ ಪಕ್ಷ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಹೋರಾಟವನ್ನು ತೀವ್ರಗೊಳಿಸಲಿದೆ.
- ಎಚ್.ಎಚ್.ದೇವರಾಜ್,
1 ಪೈಸೆ ಇಳಿಸಿದ್ದಕ್ಕೆ ಕೇಂದ್ರ ಸರಕಾರಕ್ಕೆ ಅಭಿನಂದನೆ: ದೇವರಾಜ್ ವ್ಯಂಗ್ಯ
ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ಜನಪರ ಭರವಸೆ ನೀಡಿತ್ತು. ಆದರೆ ಅವೆಲ್ಲವೂ ಸುಳ್ಳಾಗಿವೆ. ಕೊನೆ ಪಕ್ಷ ದಿನೇ ದಿನೇ ಬೆಲೆ ಏರಿಕೆ ಕಾಣುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯನ್ನಾದರೂ ಇಳಿಸಿ ಎಂದು ಜನತೆ ಕೇಳಿದರೆ. ಕೇಂದ್ರ ಸರಕಾರ 1 ಪೈಸೆ ಇಳಿಕೆ ಮಾಡಿ ದೇಶದ ಜನರಿಗೆ ಮಹದುಪಕಾರ ಮಾಡಿದೆ. 1 ಪೈಸೆ ಬೆಲೆ ಇಳಿಸಿ ಜನ ಸಾಮಾನ್ಯರ ಬಗ್ಗೆ ಕೇಂದ್ರ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸಿರುವುದಕ್ಕೆ ಪ್ರಧಾನಿ ಮೋದಿ, ಕೇಂದ್ರ ಅರ್ಥ ಸಚಿವರೂ ಸೇರಿದಂತೆ ಇಡೀ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ವ್ಯಂಗ್ಯವಾಡಿದ ದೇವರಾಜ್, ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿಲ್ಲವೆಂದು ಎತ್ತಿನಗಾಡಿ ಮೂಲದ ನಗರದ ಡಿಸಿ ಕಚೇರಿ ಎದುರು ಧರಣಿ ಮಾಡಿದ್ದರು. ಸಿ.ಟಿ.ರವಿಗೆ ತಾಕತ್ತಿದ್ದರೆ ಬೆಲೆ ಏರಿಕೆ ವಿರುದ್ಧ ಕೇಂದ್ರದ ವಿರುದ್ಧ ಅದೇ ಎತ್ತಿಗಾಡಿಗಳೊಂದಿಗೆ ಧರಣಿ ಮಾಡಲಿ. ಇದಕ್ಕೆ ಜೆಡಿಎಸ್ ಪಕ್ಷ ಸಾಥ್ ನೀಡಲಿದೆ ಎಂದು ಸವಾಲು ಹಾಕಿದರು.







