ಗಿರಿಜನರ ಅಭಿವೃದ್ಧಿಗೆ ಬಂದ 10 ಕೋಟಿ ರೂ. ಪ್ಯಾಕೇಜ್ ದುರುಪಯೋಗ: ಆರೋಪ
ಶಾಸಕ ಎಂ.ಪಿ ಕುಮಾರಸ್ವಾಮಿಯಿಂದ ತನಿಖೆಗೆ ಒತ್ತಾಯ

ಮೂಡಿಗೆರೆ, ಜೂ.2: ಸಮಗ್ರ ಗಿರಿಜನರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ದನ್ನಕ್ಕಿಹಾರ ವಾಸ್ತವ್ಯದ 10 ಕೋಟಿ ಪ್ಯಾಕೇಜ್ ಅನುದಾನ ದುರುಪಯೋಗವಾಗಿದ್ದು, ಇದರ ವಿರುದ್ಧ ದೂರು ದಾಖಲಿಸಿ ಸಮಗ್ರ ತನಿಖೆ ಮಾಡಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ಸರಕಾರದಲ್ಲಿ ಶಾಸಕ ಆಜಂನೇಯ ಸಮಾಜ ಕಲ್ಯಾಣ ಸಚಿವರಾಗಿದ್ದು, ಗಿರಿಜನರ ಹಾಡಿ ದನ್ನಕ್ಕಿಹಾರದಲ್ಲಿ ಗ್ರಾಮವಾಸ್ತವ್ಯ ಮಾಡಿ ತಾಲೂಕಿನ ಗಿರಿಜನರ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ನೀಡಿದ್ದರು. ಇದನ್ನು ಗಿರಿಜನರ ಅಭಿವೃದ್ಧಿಗೆ ಬಳಸಿಕೊಳ್ಳದೇ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಗಿರಿಜನರಿಂದ ವ್ಯಾಪಕ ದೂರು ಬಂದಿದೆ. ತಾಲೂಕಿನ ಗಿರಿಜನ ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕಿ.ಮೀ. ಗಟ್ಟಲೆ ಕುಡಿಯುವ ನೀರಿಗೆ ಅಲೆದಾಡುವ ಸ್ಥಿತಿಗೆ ಬಂದಿದೆ. ನಿವಾಸಿಗಳು ಹಳ್ಳಕೊಳ್ಳದ ಕೊಳಚೆ ನೀರನ್ನು ಉಪಯೋಗಿಸಲಾಗುತ್ತಿದೆ. ಅಲ್ಲದೆ ಅನೇಕ ಕುಟುಂಬಗಳು ಮನೆಯಿಲ್ಲದೆ ಗುಡಿಸಲಿನಲ್ಲೇ ವಾಸವಾಗಿದ್ದಾರೆ. ತೆರಳಲು ರಸ್ತೆಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ 10 ಕೋಟಿ ಹಣವನ್ನು ದುರುಪಯೋಗ ಮಾಡಿಸಿಕೊಳ್ಳುವ ಸಲುವಾಗಿ ಗುತ್ತಿಗೆದಾರರಿಗೆ ಬೇಕಾದಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಹಳೇ ಕಾಮಗಾರಿಗಳಿಗೆ ಮತ್ತು ಒಂದೇ ಕಾಮಗಾರಿಗಳಿಗೆ ಎರಡೆರಡು ಬಿಲ್ಲು ಮಾಡಿಸಿಕೊಳ್ಳಲಾಗುತ್ತಿದೆ. ಈ ಹಣವನ್ನು ಬಹು ಸಂಖ್ಯಾತ ಗಿರಿಜನರಿರುವಲ್ಲಿ ಕ್ರಿಯಾ ಯೋಜನ ತಯಾರಿಸಿ ವಿನಿಯೀಗಿಸಬೇಕಿತ್ತು. ಆದರೆ ಕೇವಲ ಒಂದೋ ಎರಡೋ ಗಿರಿ ಜನರ ಹೆಸರೇಳಿ ಬಹುಸಂಖ್ಯಾತರು ವಾಸಿಸುವ ಪ್ರದೇಶಗಳಿಗೆ ಕಾಮಗಾರಿಯ ಹೆಸರಿನಲ್ಲಿ ಹಣ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ ಈ ಹಿಂದೆ ಅಧಿಕಾರಿಗಳು ಅನೇಕ ನಕಲಿ ಬಿಲ್ಲುಗಳನ್ನು ಸೃಷ್ಟಿಮಾಡಲಾಗಿದೆ. ಕಳಪೆ ಕಾಮಗಾರಿಗಳನ್ನು ಮಾಡಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಾರ್ಯಪಾಲಕ ಇಂಜಿನಿಯರ್ ಒಬ್ಬರು ಬಿಲ್ಲುಗಳನ್ನು ಸೃಷ್ಟಿ ಮಾಡಲು ಇಡೀ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡಲಾಗಿದ್ದು, ಆ ಅಧಿಕಾರಿ ಅವರದೇ ಕೆಲವು ಕಾರಣಗಳಿಂದ ಹುದ್ದೆಯನ್ನು ತೊರೆಯುತ್ತಿರುವುದರ ಹಿಂದೆ ಮಾಮೂಲಿ ಪಡೆಯುವ ಹುನ್ನಾರವಾಗಿದೆ. ದನ್ನಕ್ಕಿಹಾರ ಪ್ಯಾಕೇಜು ದುರಪಯೋಗವಾಗುತ್ತಿರುವುದನ್ನು ಸರಕಾರದ ಗಮನಕ್ಕೆ ತಂದು ಸಮಗ್ರ ತನಿಖೆ ಮೂಲಕ ಹಿಂದುಳಿದ ಗಿರಿಜನರಿಗೆ ನ್ಯಾಯ ಒದಗಿಸಿಕೊಡಲು ಶ್ರಮಿಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







