ಕಾವೇರಿ ವಿವಾದಕ್ಕೆ ರಾಜಕೀಯ ಬಣ್ಣ: ಲೇಖಕ ಬಿ.ಆರ್.ಲಕ್ಷ್ಮಣ್‌ರಾವ್

ಬೆಂಗಳೂರು, ಜೂ. 3: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ರಾಜಕೀಯ ಬಣ್ಣ ಅಂಟಿಕೊಂಡಿರುವ ಹಿನ್ನೆಲೆಯಲ್ಲಿ ಅದು ದೊಡ್ಡ ಸಮಸ್ಯೆಯಾಗಿ ಪರಿಗಣಿಸಲ್ಪಡುತ್ತಿದೆ ಎಂದು ಲೇಖಕ ಬಿ.ಆರ್.ಲಕ್ಷ್ಮಣ್ ರಾವ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ರಾಘವೇಂದ್ರ ಹೆಗಡೆ ಅನುವಾದಿಸಿರುವ ‘ನಾಳೆಗೂ ಇರಲಿ ನೀರು’, ಎಚ್.ದುಂಡಿರಾಜ್ ಅವರ ‘ಹನಿ ಮಾರ್ದನಿ’, ಡಾ.ವಿ.ಪಿ.ನಾರಾಯಣ ಸಂಪಾದಿಸಿರುವ ‘ಬಸವಣ್ಣನ ವಚನಗಳು’, ‘ಅಕ್ಕನ ವಚನಗಳು’, ‘ಅಲ್ಲಮನ ವಚನಗಳು’, ಪುಸ್ತಕಗಳನ್ನು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿವಾದವನ್ನು ಒಂದು ನೆಲೆ ಗಟ್ಟಿನಲ್ಲಿ ಬಗೆಹರಿಸಬಹುದಾಗಿತ್ತು. ಆದರೆ, ಇದು ರಾಜಕೀಯ ಸಮಸ್ಯೆಯಾಗಿ ಉಳಿದು ಕೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ವಿವಾದ ಕಗ್ಗಂಟಾಗಿ ಉಳಿದುಕೊಂಡಿದೆ. ಆದರೆ, ನೀರಿನ ನಿರ್ವಹಣೆ ವಿಚಾರದಲ್ಲಿ ಇಸ್ರೇಲ್ ಇಡೀ ವಿಶ್ವಕ್ಕೆ ಮಾದರಿ ಎಂದು ಬಣ್ಣಿಸಿದರು.
ಇಸ್ರೇಲ್ ಒಂದು ಕಡೆ ಮರುಭೂಮಿಯ ಪ್ರದೇಶವಾಗಿದ್ದರೂ, ನೀರು ನಿರ್ವಹಣೆ ವಿಚಾರದಲ್ಲಿ ಜಾಣ್ಮೆ ತೋರಿದೆ. ರಾಜಕೀಯದಿಂದ ನೀರು ನಿರ್ವಹಣೆ ಮುಕ್ತವಾಗಿರುವುದೇ ಆ ದೇಶ ಇಷ್ಟೊಂದು ಹೆಸರು ಮಾಡಲು ಸಾಧ್ಯವಾಯಿತು. ಈ ವಿಚಾರನ್ನು ಮನ ಮುಟ್ಟುವ ಹಾಗೇ ಲೇಖಕರು ‘ನಾಳೆಗೂ ಇರಲಿ ನೀರು’, ಕೃತಿಯಲ್ಲಿ ಹೇಳಿದ್ದಾರೆ. ಇದೀಗ ಇಸ್ರೇಲ್ ಮಾದರಿಯ ಕೃಷಿಗೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರು ಮುಂದಾಗಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡ ಸಾರಸ್ವತ ಲೋಕದಲ್ಲಿ ಹನಿಗವನಕ್ಕೆ ಒಂದು ದೊಡ್ಡ ಪರಂಪರೆ ಇದೆ. ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಂದ ಪ್ರೇರಿತರಾಗಿ ಕವಿತೆಗಳನ್ನು ಬರೆಯಲು ಆರಂಭಿಸಿದ ದುಂಡಿರಾಜ್, ಹನಿಗವನ ಕ್ಷೇತ್ರದ ‘ಅಕ್ಷಯ ಪಾತ್ರೆ’ ಎಂದು ವರ್ಣಿಸಿದರು. ಇದೇ ವೇಳೆ, ಲೇಖಕ ಡಾ. ಪಿ.ವಿ. ನಾರಾಯಣ ಅವರ ಬರಹಗಳನ್ನು ಕೊಂಡಾಡಿದರು.
ಹಾಸ್ಯ ಲೇಖಕ ನರಸಿಂಹ ಮೂರ್ತಿ ಮಾತನಾಡಿ, ಅನುವಾದ ಕಷ್ಟಕರವಾದ ವಿಷಯ. ಆದರೂ, ಇಷ್ಟಪಟ್ಟು ಲೇಖಕರು ಕನ್ನಡಕ್ಕೆ ಒಂದು ಉತ್ತಮ ಅನುವಾದ ಪುಸ್ತಕವನ್ನು ನೀಡಿದ್ದಾರೆ ಎಂದು ರಾಘವೇಂದ್ರ ಹೆಗಡೆ ಅವರ ಕಾರ್ಯವನ್ನು ಪ್ರಶಂಸಿಸಿದರು.ಅಲ್ಲದೆ ಹನಿಗವನ ಕ್ಷೇತ್ರಕ್ಕೆ ದುಂಡಿರಾಜ್ ಸ್ಫೂರ್ತಿಯ ಸೆಲೆ ಎಂದು ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರಾದ ರಾಘವೇಂದ್ರ ಹೆಗಡೆ, ಡಾ.ವಿ.ಪಿ.ನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







