ಸರಕಾರವು ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದ ಗೋವಾ ಬಿಜೆಪಿ ನಾಯಕಿ
ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ

ಪಣಜಿ, ಜೂ.3: ಕೆಲವು ದಿನಗಳ ಹಿಂದೆ ದಕ್ಷಿಣ ಗೋವಾದ ಬೀಚೊಂದರಲ್ಲಿ 20ರ ಹರೆಯದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಗೋವಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸುಲಕ್ಷಣಾ ಸಾವಂತ್ ಅವರು,ಸರಕಾರವು ಪ್ರತಿಯೊಬ್ಬ ವ್ಯಕ್ತಿಗೂ ಸುರಕ್ಷತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೊಂದು ಹತಾಶ ಹೇಳಿಕೆ ಎಂದು ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್,ಸಾವಂತ ಅವರು ನೈತಿಕತೆಯ ಕಾರಣದಿಂದ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹೇಳಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮೇ 25ರಂದು ದಕ್ಷಿಣ ಗೋವಾ ಬೀಚ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಾವಂತ,ಸರಕಾರವು ಎಲ್ಲರಿಗೂ ಸುರಕ್ಷತೆಯನ್ನು ಒದಗಿಸಲು ಸಾಧ್ಯವಿಲ್ಲ. ನಾವು ಜನರ ಮನಃಸ್ಥಿತಿಯನ್ನು ಬದಲಿಸುವ ಅಗತ್ಯವಿದೆ. ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ರಕ್ಷಕನಾಗಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ಇಂತಹ ಅಪರಾಧಗಳ ಬಗ್ಗೆ ದೂರು ಸಲ್ಲಿಸಲು ಮಹಿಳೆಯರು ಮುಂದೆ ಬರುತ್ತಿರುವುದರಿಂದ ಪೋಲಿಸರಿಗೆ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ತಾವು ಮುಂದೆ ಬಂದು ಇಂತಹ ಪ್ರಕರಣಗಳನ್ನು ವರದಿ ಮಾಡಿದರೆ ಏನಾದರೂ ಬದಲಾವಣೆಯಾಗಬಹುದು ಎಂದು ಮಹಿಳೆಯರು ಭಾವಿಸಿದ್ದಾರೆ ಎಂದ ಅವರು,ಪ್ರತಿವರ್ಷ ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುವ ರಾಜ್ಯದ ಬೀಚ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸುವಂತೆ ಬಿಜೆಪಿ ಮಹಿಳಾ ಘಟಕವು ರಾಜ್ಯ ಪ್ರವಾಸೋದ್ಯಮ ಇಲಾಖೆಯನ್ನು ಕೋರಲಿದೆ ಎಂದು ತಿಳಿಸಿದರು.
ತನ್ಮಧ್ಯೆ,ಪ್ರತಿಯೊಬ್ಬ ವ್ಯಕ್ತಿಗೂ ಸುರಕ್ಷತೆಯನ್ನು ಒದಗಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಹೇಳಿರುವ ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪ್ರತಿಮಾ ಕುಟಿನೊ ಅವರು,ಹತಾಶ ಹೇಳಿಕೆಯನ್ನು ನೀಡಿರುವ ಸಾವಂತ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.







