2019ರ ಚುನಾವಣೆಯಲ್ಲಿ ಮಂದಿರ, ಹಿಂದುತ್ವ ವಿಷಯಗಳಿಗೆ ಜಾಗವಿಲ್ಲ: ಕೇಂದ್ರ ಸಚಿವ ನಖ್ವಿ

ಪಣಜಿ, ಜೂ. 3: ಬಿಜೆಪಿಯು 2019ರ ಚುನಾವಣೆಯಲ್ಲಿ ‘ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ’ ವಿಷಯವನ್ನೇ ಮುಂದಿಟ್ಟುಕೊಂಡು ಹೋರಾಟ ನಡೆಸಲಿದೆ ಮತ್ತು ಹಿಂದುತ್ವ ಅಥವಾ ಮಂದಿರ ವಿಷಯಗಳಿಗೆ ಇಲ್ಲಿ ಅವಕಾಶವಿಲ್ಲ . ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 2019ರಲ್ಲಿ ಪ್ರಧಾನ ಮಂತ್ರಿ ಹುದ್ದೆ ಖಾಲಿಯಿರುವುದಿಲ್ಲ. ದೇಶದ ಜನತೆಯ ಅಭ್ಯುದಯದ ದೃಷ್ಟಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯದಿಂದಾಗಿ ಪ್ರಧಾನಿ ಮೋದಿ ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯಲಿದ್ದಾರೆ ಎಂದರು. ಭಿನ್ನಾಭಿಪ್ರಾಯ, ಅಂರ್ ವಿರೋಧ ಹಾಗೂ ಭ್ರಷ್ಟಾಚಾರ ಇವು ಮೋದಿ ವಿರೋಧಿ ಒಕ್ಕೂಟದ ಸಾಮಾನ್ಯ ಬದ್ಧತೆಯಾಗಿದೆ ಎಂದು ನಖ್ವಿ ಟೀಕಿಸಿದರು. ತಾವು ದೇಶದಲ್ಲಿ ಸುರಕ್ಷಿತವಾಗಿಲ್ಲ ಎಂಬ ಗ್ರಹಿಕೆ ಅಲ್ಪಸಂಖ್ಯಾತರಲ್ಲಿದ್ದು ಈ ಅನಿಸಿಕೆಯನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾರ್ಯ ನಡೆಸಿದ್ದೇವೆ. ಅಭಿವೃದ್ಧಿ ಕಾರ್ಯವನ್ನು ಅಲ್ಪಸಂಖ್ಯಾತ ಸಮುದಾಯದ ಬಡಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಅಲ್ಪಸಂಖ್ಯಾತರಲ್ಲಿ ಭೀತಿ ಹಾಗೂ ಆತಂಕ ಮೂಡಿಸುವ ಮೂಲಕ ಕೆಲವು ರಾಜಕೀಯ ಶಕ್ತಿಗಳು ಅಭಿವೃದ್ಧಿ, ಶಾಂತಿ ಹಾಗೂ ಸಮೃದ್ಧಿಯ ಸ್ಥಿತಿಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೆಲವು ಪ್ರತ್ಯೇಕ ಪ್ರಕರಣಗಳನ್ನು ಹೊರತುಪಡಿಸಿ ಪ್ರಮುಖ ಕೋಮುಗಲಭೆ ಪ್ರಕರಣ ದೇಶದಲ್ಲಿ ನಡೆದಿಲ್ಲ. ಈ ಕೋಮುಗಲಭೆ ಪ್ರಕರಣಗಳ ಬಗ್ಗೆ ಸರಕಾರ ಸಕಾಲಿಕ ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಜೈಲಿಗಟ್ಟಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ನಖ್ವಿ ಹೇಳಿದರು. ಅಲ್ಪಸಂಖ್ಯಾತರ ವಿಷಯ ಮುಂದಿಟ್ಟು ಸರಕಾರದ ಹೆಸರು ಕೆಡಿಸುವ ವಿಪಕ್ಷಗಳ ಪ್ರಯತ್ನ ಯಶಸ್ವಿಯಾಗದು . ವಿಪಕ್ಷಗಳಂತೆ ಬಿಜೆಪಿಯು ಅಲ್ಪಸಂಖ್ಯಾತರನ್ನು ಓಟ್‌ಬ್ಯಾಂಕ್ ಎಂದು ಯಾವತ್ತೂ ಪರಿಗಣಿಸಿಲ್ಲ ಎಂದು ನಖ್ವಿ ತಿಳಿಸಿದರು.







