ಮತದಾರರ ಪಟ್ಟಿಗಳಲ್ಲಿ ನಕಲಿ ಹೆಸರು ಸೇರಿಸುತ್ತಿರುವ ಬಿಜೆಪಿ: ಕಾಂಗ್ರೆಸ್ ಆರೋಪ

ಭೋಪಾಲ.ಜೂ.3: ರಾಜ್ಯದಲ್ಲಿ ಮತದಾರರ ಪಟ್ಟಿಗಳಲ್ಲಿ ನಕಲಿ ಹೆಸರುಗಳನ್ನು ಸೇರಿಸುವುದರಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ರವಿವಾರ ಆರೋಪಿಸಿದೆ.
ಮತದಾರರ ಪಟ್ಟಿಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರು,ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಕೇವಲ ಶೇ.24ರಷ್ಟು ಏರಿಕೆಯಾಗಿರುವಾಗ ಮತದಾರರ ಸಂಖ್ಯೆ ಶೇ.40ರಷ್ಟು ಹೆಚ್ಚಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಗಳಲ್ಲಿ ಸುಮಾರು 60 ಲಕ್ಷ ನಕಲಿ ಮತದಾರರ ಹೆಸರುಗಳು ನೋಂದಣಿಯಾಗಿವೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ನಾವು ಚುನಾವಣಾ ಆಯೋಗಕ್ಕೆ ಒದಗಿಸಿದ್ದೇವೆ. ಉದ್ದೇಶಪೂರ್ವಕವಾಗಿ ಈ ಹೆಸರುಗಳನ್ನು ಸೇರಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಲಕ್ಷವಲ್ಲ, ಇದು ಆಡಳಿತಾತ್ಮಕ ದುರುಪಯೋಗವಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಹವಾಲಿನಲ್ಲಿ ಕಾಂಗ್ರೆಸ್,ಹಲವಾರು ಹೆಸರುಗಳು ಪುನರಾವರ್ತನೆಗೊಂಡಿವೆ,ನಕಲಿ ಹೆಸರುಗಳನ್ನು ಸೇರಿಸಲಾಗಿದೆ ಎಂದು ದೂರಿದೆ. ಒಂದೇ ಹೆಸರು ಐದು ಬಾರಿ ಪುನರಾವರ್ತನೆಗೊಂಡಿರುವ ಪ್ರಕರಣವನ್ನೂ ಅದು ನಿದರ್ಶನವಾಗಿ ನೀಡಿದೆ. ಈ ವರ್ಷದ ಜನವರಿಯಲ್ಲಿ ಮತದಾರರ ಪಟ್ಟಿಗಳನ್ನು ಪ್ರಕಟಿಸಿದ್ದ ಚುನಾವಣಾಧಿಕಾರಿಯ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಹೊಸದಾಗಿ ಮತದಾರರ ಪಟ್ಟಿಗಳನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದೆ. ಕುತೂಹಲದ ವಿಷಯವೆಂದರೆ ಕಳೆದ ವರ್ಷ ಪೊಲೀಸ್ ಗೋಲಿಬಾರ್‌ನಲ್ಲಿ ಹಲವಾರು ಜನರು ಕೊಲ್ಲಲ್ಪಟ್ಟಿದ್ದ ರೈತರ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ ಮಂದಸೌರ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಕಲಿ ಹೆಸರುಗಳು ಮತದಾರರ ಪಟ್ಟಿಗಳಲ್ಲಿ ಸೇರ್ಪಡೆಗೊಂಡಿವೆ ಎನ್ನಲಾಗಿದೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು,ಮತದಾರರ ಪಟ್ಟಿಗಳಲ್ಲಿ ಅಕ್ರಮಗಳ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಕೈವಾಡವಿದೆ ಎಂದು ದೂರಿದರು. ನಾವು ರಾಜ್ಯದ 101 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಪರಿಶೀಲಿಸಿದ್ದು,24,65,000 ನಕಲಿ ಮತದಾರರು ಪತ್ತೆಯಾಗಿದ್ದಾರೆ. ಇತರ 91 ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ಹಲವಾರು ಮತಗಟ್ಟೆಗಳಲ್ಲಿ ನೋಂದಣಿಗೊಂಡಿರುವ ಇಂತಹ 27 ಲಕ್ಷ ಮತದಾರರನ್ನು ಪತ್ತೆ ಹಚ್ಚಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯದ ಒಟ್ಟು ಐದು ಕೋಟಿ ಮತದಾರರ ಪಟ್ಟಿಯಲ್ಲಿ ಸುಮಾರು 60 ಲಕ್ಷ ನಕಲಿ ಮತದಾರರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.







