ಜುಬೈಲ್ನಲ್ಲಿ ರಸ್ತೆ ಅಪಘಾತ: ಗೂಡಿನಬಳಿಯ ನಿವಾಸಿ ಮೃತ್ಯು

ಅನ್ಝರ್
ಬಂಟ್ವಾಳ, ಜೂ. 3: ಸೌದಿ ಅರೇಬಿಯಾದ ಜುಬೈಲ್ನಲ್ಲಿ ರವಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಗೂಡಿನಬಳಿಯ ನಿವಾಸಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಅನ್ಝರ್ (26) ಎಂದು ಗುರುತಿಸಲಾಗಿದೆ. ಅನ್ಝರ್ ಅವರು ರವಿವಾರ ಮುಂಜಾನೆ ವಾಹನವೊಂದರಲ್ಲಿ ಕಾರ್ಯ ನಿಮಿತ್ತ ಹೊರಗಡೆ ತೆರಳಿದ್ದರು. ಸೌದಿ ಅರೇಬಿಯಾದ ಜುಬೈಲ್ ಸಮೀಪ ನಿಯಂತ್ರಣ ತಪ್ಪಿದ ವಾಹನವು ಕಂಬಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ವಾಹನದಲ್ಲಿ ಅನ್ಝರ್ ಹಾಗೂ ಉತ್ತರಪ್ರದೇಶದ ಇಬ್ಬರು ಪ್ರಯಾಣಿಕರಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅನ್ಝರ್ ಅವರ ಕುಟುಂಬ ಮೂಲಗಳು ತಿಳಿಸಿವೆ.
ನವ ವಿವಾಹಿತರಾದ ಅನ್ಝರ್ ಅವರು, ಮದುವೆಯಾಗಿ ಕೆಲವು ದಿನಗಳ ಹಿಂದೆಯಷ್ಟೆ ಊರಿನಿಂದ ಸೌದಿ ಅರೇಬಿಯಾಗೆ ಮರಳಿದ್ದರು. ಅನ್ಝರ್ ಸೌದಿ ಅರೇಬಿಯಾದಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್ನ ಮುಖಂಡರಾದ ಕಮರುದ್ದೀನ್, ಆಸಿಫ್, ಸಮೀವುಲ್ಲಾ ಗೂಡಿನಬಳಿ ಅವರ ಸಹೋದರಿಯ ಪುತ್ರ ಎಂದು ಅವರ ಆಪ್ತರು ತಿಳಿಸಿದ್ದಾರೆ. ಮೃತದೇಹವನ್ನು ಜುಬೈಲ್ನ ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತರ ಅಂತ್ಯಸಂಸ್ಕಾರವನ್ನು ಜುಬೈಲ್ನಲ್ಲಿಯೇ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರಿಗೆ ಪಿಎಫ್ಐ ಬಂಟ್ವಾಳ ಘಟಕಾಧ್ಯಕ್ಷ ಇಜಾಝ್ ಸಂತಾಪ ಸೂಚಿಸಿದ್ದಾರೆ.







