ದೇರಳಕಟ್ಟೆ: ರಸ್ತೆ ಅಪಘಾತ; ರಿಕ್ಷಾ ಚಾಲಕ, ಮೂವರು ಪ್ರಯಾಣಿಕರಿಗೆ ಗಾಯ
ಕೊಣಾಜೆ, ಜೂ. 3: ಕಾರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು, ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ದೇರಳಕಟ್ಟೆ ಸಮೀಪ ಶನಿವಾರ ತಡರಾತ್ರಿ ಸಂಭವಿಸಿದೆ.
ಅಪಘಾತದಿಂದ ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ಅಸೈಗೋಳಿ ನಿವಾಸಿ ದಿವಾಕರ್ (35) ಎಂದು ಗುರುತಿಸಲಾಗಿದೆ. ದೇರಳಕಟ್ಟೆಯಿಂದ ಕುತ್ತಾರು ಸಿಲಿಕೋನಿಯಾ ಫ್ಲಾಟಿನ ಕಡೆಗೆ ಬಾಡಿಗೆಗೆ ಕೊಂಡೊಯ್ಯುತ್ತಿದ್ದ ರಿಕ್ಷಾಕ್ಕೆ ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬಂದ ನಾಲ್ಕು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನನ್ನು ಅವಶೇಷಗಳಿಂದ ಹೊರ ತೆಗೆಯಲು ಕೆಲ ಸಮಯ ತಗಲಿತು. ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಬದಿಯಲ್ಲಿದ್ದ ಮೂವರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ದಕ್ಷಿಣ ಸಂಚಾರಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





