ಸಿದ್ದಾಪುರ ಜಿಪಂ ಉಪ ಚುನಾವಣೆ: ನಾಲ್ವರಿಂದ ನಾಮಪತ್ರ ಸಲ್ಲಿಕೆ
ಕುಂದಾಪುರ, ಜೂ.3: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಜಿಪಂನ ತೆರವಾದ ಸದಸ್ಯ ಸ್ಥಾನಕ್ಕೆ ಜೂ.14ರಂದು ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಜೂ.2ರವರೆಗೆ ಒಟ್ಟು ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿಯಿಂದ ರೋಹಿತ ಕುಮಾರ ಶೆಟ್ಟಿ, ಕಾಂಗ್ರೆಸ್‌ನಿಂದ ಪ್ರಸನ್ನ ಕುಮಾರ ಶುಕ್ರವಾರ, ಜೆಡಿಎಸ್‌ನಿಂದ ಅರುಣ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಅಮರನಾಥ ಶೆಟ್ಟಿ ಶನಿವಾರ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಚುನಾವಣಾ ಅಧಿಕಾರಿ, ಕುಂದಾಪುರ ತಹಸೀಲ್ದಾರ್ ರವಿ ಎಸ್. ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಸಿದ್ದಾಪುರ ಜಿಪಂ ಸದಸ್ಯರಾಗಿದ್ದ ಬಿಜೆಪಿಯ ಹಾಲಾಡಿ ತಾರನಾಥ ಶೆಟ್ಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಜೂ. 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ.6ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಗತ್ಯ ಬಿದ್ದರೆ ಜೂ.14ರಂದು ಚುನಾ ವಣೆ ನಡೆಯಲಿದ್ದು, ಜೂ.17ರಂದು ಮತ ಎಣಿಕೆ ನಡೆಯಲಿದೆ.
ಮೃತ ಹಾಲಾಡಿ ತಾರನಾಥ ಶೆಟ್ಟಿ ಅವರ ಸಹೋದರ ಅಮರನಾಥ ಶೆಟ್ಟಿ ಬಿಜೆಪಿಯಾಗಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮರನಾಥ ಶೆಟ್ಟಿ ಟಿಕೇಟು ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತಿದ್ದಾರೆ.







