ಚಿಕ್ಕಮಗಳೂರು: ಅತಿವೃಷ್ಠಿ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ

ಚಿಕ್ಕಮಗಳೂರು, ಜೂ.3: ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಈ ಮೂರು ತಾಲೂಕುಗಳಲ್ಲಿ ವಾಡಿಕೆಗಿಂತ ಶೇ.190ರಷ್ಟು ಹೆಚ್ಚಿಗೆ ಮಳೆಯಾಗಿದೆ. ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ನಡೆದ ಅತಿವೃಷ್ಠಿಯಿಂದಾದ ಸಮಸ್ಯೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೆ ಬೆಳೆಗಳು ಹಾನಿಯಾಗಿಲ್ಲ ಹಾಗೂ ಬಿತ್ತನೆ ಬೀಜ, ರಸಗೊಬ್ಬರ, ಮೇವು ದಾಸ್ತಾನುಗಳ ಬಗ್ಗೆ ಪರಿಶೀಲಿಸಿದ ಕಾರ್ಯದರ್ಶಿಗಳು ಇವುಗಳ ಕೊರತೆ ಇರುವುದಿಲ್ಲದಿರುವುದನ್ನು ಖಾತರಿ ಪಡಿಸಿಕೊಂಡರು. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರವನ್ನು ನಿಗಧಿತ ಸಮಯದಲ್ಲಿ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು ಮಳೆಗಾಲ ಆಗಿರುವುದರಿಂದ ಸಾಂಕ್ರಾಮಿಕ ರೋಗಗಳು ಬಾರದಂತೆ ನೋಡಿಕೊಳ್ಳುವುದರ ಜೊತೆಗೆ ಶುದ್ಧ ಕುಡಿಯುವ ನೀರು ವಿದ್ಯುತ್‍ಚ್ಛಕ್ತಿ ಮೂಲಭೂತ ಸೌಕರ್ಯಗಳಿಗೆ ತೊಂದೆರೆಯಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಶನಿವಾರ ಸಭೆ ಸೇರಿ ತಾಲೂಕಿನ ಮಳೆ, ಬೆಳೆ ಮತ್ತಿತರ ಮೂಲಭೂತ ಸೌಲಭ್ಯಗಳ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಿ ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸುವಂತೆ ಸೂಚಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ನಿಗಾವಹಿಸಿ ಕೆಲಸ ಮಾಡುವಂತೆ ತಿಳಿಸಿದ ಅವರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ರಜೆ ಅಥವಾ ಕೇಂದ್ರ ಸ್ಥಾನ ಬಿಡಬಾರದೆಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಜಾನುವಾರುಗಳು ಮೃತಪಟ್ಟಿದ್ದು, ಅವುಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಮೂಡಿಗೆರೆಯಲ್ಲಿ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಹಾಗೂ ಜಿಲ್ಲೆಯ ಮಳೆಯ ವಿವರದ ಜೊತೆಗೆ ಆಗಿರುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಕಾರ್ಯದರ್ಶಿಗಳಿಗೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ, ಉಪವಿಭಾಗಾಧಿಕಾರಿ ಬಿ.ಸರೋಜ, ಜಂಟಿ ಕೃಷಿ ನಿರ್ದೇಶಕಿ ಎಂ.ಸಿ.ಸೀತ, ತೋಟಗಾರಿಕ ಇಲಾಖೆಯ ಉಪ ನಿರ್ದೇಶಕರಾದ ಪೂರ್ಣಿಮಾ, ನಗರಸಭೆ ಆಯುಕ್ತೆ ತುಷಾರಮಣಿ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರುಗಳು, ಪುರಸಭೆ ಮುಖ್ಯ ಅಧಿಕಾರಿಗಳು ಹಾಗೂ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







