ಜಯಪುರ: ಸದ್ಗುರು ಶಾಲೆಗೆ ಕರ್ನಾಟಕ ಬ್ಯಾಂಕ್‍ನಿಂದ ಶಾಲಾ ವಾಹನ ಕೊಡುಗೆ

ಜಯಪುರ, ಜೂ.3: ಮಕ್ಕಳು ತಮ್ಮ ಶಾಲಾ ದಿನಗಳಲ್ಲಿ ಹಣವನ್ನು ಉಳಿಸುವ ಉದ್ದೇಶದಿಂದ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆಗೆಯುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡು ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ಶಿವಮೊಗ್ಗ ವಿಭಾಗದ ಎ.ಜಿ.ಎಮ್. ರವಿಕುಮಾರ್ ಸಲಹೆ ನೀಡಿದರು.
ಕೊಪ್ಪ ತಾಲೂಕು ಬಸರೀಕಟ್ಟೆಯ ಸದ್ಗುರು ಪ್ರೌಢಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ 17.05 ಲಕ್ಷ ರೂ. ವೆಚ್ಚದಲ್ಲಿ ನೀಡಿದ ಶಾಲಾ ಬಸ್ಸನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಬಸರೀಕಟ್ಟೆ ಸುತ್ತಮುತ್ತಲಿನಿಂದ ಬರುವ ವಿದ್ಯಾರ್ಥಿಗಳು ಶಾಲೆಗೆ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದು, ನಿಯಮಿತ ಬಸ್ಸುಗಳ ಸಂಚಾರ ವಿರುವುದರಿಂದ ಅವುಗಳು ಬಹುತೇಕ ಸಂದರ್ಭದಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಕಷ್ಟಕರವಾಗುತ್ತಿದೆ. ಇದೆಲ್ಲವನ್ನೂ ಪರಿಗಣಿಸಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಸದ್ಗುರು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕರ್ನಾಟಕ ಬ್ಯಾಂಕಿನ ಸಿಇಒ, ಡಾ. ಮಹಾಬಲೇಶ್ವರರವರ ಮಾತಿನಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸದ್ಗುರು ಪ್ರೌಢ ಶಾಲೆಯ ಸಮಿತಿ ಅಧ್ಯಕ್ಷ ತಲವಾನೆ ಪ್ರಕಾಶ್, ಸಹಕಾರ್ಯದರ್ಶಿ ನಟರಾಜ್, ನಿರ್ದೇಶಕ ಬೆಂಡೆಹಕ್ಲು ನಾರಾಯಣ್, ಮಧುಸುದನ್, ಕರ್ನಾಟಕ ಬ್ಯಾಂಕ್ ಕಳಸ ಶಾಖೆಯ ವ್ಯವಸ್ಥಾಪಕ ಹರೀಶ್ ಭಟ್, ಮುಖ್ಯೋಪಾಧ್ಯಾಯ ಗಣೇಶ್ ಪ್ರಸಾದ್, ಕೀರ್ತನಾ ಸ್ವಾಮಿ, ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.





