ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಣವ್ ಮುಖರ್ಜಿ

ಹೊಸದಿಲ್ಲಿ, ಜೂ.3: ಆರೆಸ್ಸೆಸ್ ಆಹ್ವಾನವನ್ನು ಒಪ್ಪಿಕೊಂಡಿರುವ ವಿಷಯದಲ್ಲಿ ಉಂಟಾಗಿರುವ ವಿವಾದದಿಂದ ವಿಚಲಿತರಾಗದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂಬ ಆಗ್ರಹಗಳಿಗೆ ನಾಗಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.
“ನನಗೆ ಹಲವು ಪತ್ರಗಳು, ಕೋರಿಕೆ, ಫೋನ್ ಕರೆಗಳು ಬಂದಿವೆ. ಯಾವುದಕ್ಕೂ ನಾನು ಪ್ರತಿಕ್ರಿಯಿಸಿಲ್ಲ. ನಾನು ಹೇಳಲಿರುವುದನ್ನು ನಾಗಪುರದಲ್ಲಿ ಹೇಳುತ್ತೇನೆ” ಎಂದು ಮುಖರ್ಜಿ ತಿಳಿಸಿರುವುದಾಗಿ ಪಶ್ಚಿಮಬಂಗಾಳದ ದಿನಪತ್ರಿಕೆ ‘ಆನಂದಬಝಾರ್’ ತಿಳಿಸಿದೆ. ಜೂನ್ 7ರಂದು ನಾಗಪುರದಲ್ಲಿ ನಡೆಯಲಿರುವ ಆರೆಸ್ಸೆಸ್‌ನ ವಾರ್ಷಿಕ ತರಬೇತಿ ಶಿಬಿರ‘ಶಿಕ್ಷಾ ವರ್ಗ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿರುವ ಪ್ರಣಬ್ ಮುಖರ್ಜಿ, ಅಲ್ಲಿ ಉಪನ್ಯಾಸ ನೀಡುವ ಕಾರ್ಯಕ್ರಮವಿದೆ.
ಆಹ್ವಾನವನ್ನು ಒಪ್ಪಿಕೊಂಡಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದರೆ, ಬಿಜೆಪಿ ಹಾಗೂ ಆರೆಸ್ಸೆಸ್ ಸ್ವಾಗತಿಸಿದೆ. ಆಹ್ವಾನವನ್ನು ಒಪ್ಪಿಕೊಳ್ಳುವ ಮೂಲಕ ವಿರೋಧಿಗಳು ಶತ್ರುಗಳಲ್ಲ ಮತ್ತು ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಯಬೇಕು ಎಂಬ ಸ್ಪಷ್ಟ ಸಂದೇಶವನ್ನು ಮಾಜಿ ರಾಷ್ಟ್ರಪತಿಗಳು ನೀಡಿದ್ದಾರೆ. ಆರೆಸ್ಸೆಸ್‌ನ ಹಿಂದುತ್ವವಾದಿ ಧೋರಣೆಯ ಕುರಿತ ಪ್ರಶ್ನೆಗಳಿಗೆ ಮುಖರ್ಜಿ ಈ ರೀತಿ ಉತ್ತರಿಸಿದ್ದಾರೆ ಎಂದು ಆರೆಸ್ಸೆಸ್ ಸಿದ್ಧಾಂತವಾದಿ ರಾಕೇಶ್ ಸಿನ್ಹ ಹೇಳಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಚಿದಂಬರಂ, ಮಾಜಿ ರಾಷ್ಟ್ರಪತಿಯವರು ಆಹ್ವಾನ ಸ್ವೀಕರಿಸಿಯಾಗಿದೆ. ಯಾಕೆ ಸ್ವೀಕರಿಸಿದ್ದು ಎಂಬ ಬಗ್ಗೆ ಚರ್ಚೆ ಬೇಡ. ಅವರು ಅಲ್ಲಿಗೆ ಹೋಗಿ ಆರೆಸ್ಸೆಸ್‌ನ ಸಿದ್ಧಾಂತದಲ್ಲಿ ಇರುವ ದೋಷವನ್ನು ತಿಳಿಹೇಳಲಿ ಎಂದಿದ್ದಾರೆ. ಪ್ರಣವ್ ಮುಖರ್ಜಿಯವರಿಗೆ ಪತ್ರ ಬರೆದಿರುವ ಕೇರಳ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಚೆನ್ನಿತ್ತಲ, ಮುಖರ್ಜಿಯವರ ನಿಲುವಿನಿಂದ ಜಾತ್ಯಾತೀತ ಮನೋಭಾವದವರಿಗೆ ಭಾರೀ ಆಘಾತವಾಗಿದೆ . ಕಾಂಗ್ರೆಸ್‌ನ ಧೋರಣೆಯಾದ ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೂ , ಒಂದು ವರ್ಗದ ಜನತೆ ಒಳಗೊಂಡಿರುವ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಆರೆಸ್ಸೆಸ್‌ನ ಧೋರಣೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.
ಆದರೆ ಮುಖರ್ಜಿ ನಿಲುವನ್ನು ಬೆಂಬಲಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ, ರಾಜಕೀಯ ರಂಗದಲ್ಲಿ 60 ವರ್ಷದ ಅನುಭವಿಯಾಗಿರುವ ವ್ಯಕ್ತಿಯೊಬ್ಬರು ಆಹ್ವಾನವನ್ನು ಒಪ್ಪಿಕೊಂಡೊಡನೆ ಅವರ ಬಗ್ಗೆ ತೀರ್ಪು ನೀಡುವ ಬದಲು, ಅವರು ಎಲ್ಲಿ ಏನು ಮಾತಾಡುತ್ತಾರೆ ಎಂಬುದನ್ನು ನೋಡಿ ಆ ಮೇಲೆ ಮಾತಾಡಬೇಕು ಎಂದಿದ್ದಾರೆ. ಈ ಮಧ್ಯೆ, ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರೆಸ್ಸೆಸ್ ಸಿದ್ಧಾಂತದ ಬಗ್ಗೆ ಆಕ್ಷೇಪಿಸಲು ಯಾವುದೇ ಕಾರಣಗಳಿಲ್ಲ. ಮಹಾತ್ಮಾ ಗಾಂಧೀಜಿಯವರು ಕೂಡಾ ಆರೆಸ್ಸೆಸ್ ಸಂಘಟನೆ ಪ್ರತಿಪಾದಿಸಿರುವ ರಚನಾತ್ಮಕ ವೌಲ್ಯಗಳನ್ನು ಅಂಗೀಕರಿಸಿದ್ದರು ಎಂದಿದ್ದಾರೆ.







