ಬೆಳ್ತಂಗಡಿ: ನದಿಯ ಸ್ವಚ್ಛತಾ ಕಾರ್ಯಕ್ರಮ

ಬೆಳ್ತಂಗಡಿ, ಜೂ. 3: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ, ಅಸಂಖ್ಯಾತ ರೈತರ ಆಶಾಕಿರಣ, ಬೆಂಗಳೂರಿನ ಯುವಾ ಬ್ರಿಗೇಡ್ ನೇತೃತ್ವದಲ್ಲಿ ರಾಜ್ಯದೆಲ್ಲೆಡೆಯಿಂದ ಬಂದ 500ಕ್ಕೂ ಮಿಕ್ಕಿ ಕಾರ್ಯಕರ್ತರು ರವಿವಾರ ನದಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ನಾನ ಮಾಡಿ ನದಿ ನೀರಿನಲ್ಲೆ ಬಟ್ಟೆ ಒಗೆಯುವುದರಿಂದ, ತ್ಯಾಜ್ಯಗಳನ್ನು ಹಾಕುವುದರಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ತೀರ್ಥಕ್ಷೇತ್ರದಲ್ಲಿರುವ ನದಿಗಳಲ್ಲಿ ಬಟ್ಟೆ ಒಗೆಯದಂತೆ ಸರ್ಕಾರವೆ ಕಡ್ಡಾಯ ಕಾನೂನು ಜಾರಿ ಮಾಡಬೇಕು ಎಂದರು.
ಯುವ ಬ್ರಿಗೇಡ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದ ಅವರು ಭಕ್ತರು ಕೂಡಾ ಮೂಢನಂಬಿಕೆಗೆ ಒಳಗಾಗದೆ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ನದಿಯ ಪಾವಿತ್ರ್ಯ ಕಾಪಾಡಬೇಕು. ಇದು ರಾಷ್ಟ್ರ ವ್ಯಾಪಿ ಆಂದೋಲನವಾಗಬೇಕು ಎಂದು ಅವರು ಸಲಹೆ ನೀಡಿದರು. ಶಾಲಾ-ಕಾಲೇಜುಗಳಲ್ಲಿರುವ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಕೂಡಾ ಸ್ವಚ್ಛತೆ ಮತ್ತು ಪಾವಿತ್ರ್ಯತೆ ಕಾಪಾಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೆಗ್ಗೆಯವರು ಕಿವಿಮಾತು ಹೇಳಿದರು.
ಯುವ ಬ್ರಿಗೇಡ್ ಕರೆ: ಸ್ನಾನ ಮಾಡುವ ನೆಪದಲ್ಲಿ, ವಿಭಿನ್ನ ಆಚರಣೆಗಳ ಹಿನ್ನೆಲೆಯಲ್ಲಿ ಮೂಢ ನಂಬಿಕೆಯಿಂದ ನಾವೆಲ್ಲ ನೇತ್ರಾವತಿ ನದಿಯನ್ನು ಕಲುಷಿತಗೊಳಿಸಿದ್ದೇವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಅನುಮತಿಯೊಂದಿಗೆ ನಾವು ಇಂದು ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ದಯ ಮಾಡಿ ನದಿಯನ್ನು ಎಂದಿಗೂ ಕಲುಷಿತಗೊಳಿಸಬೇಡಿ, ಕೊಳಕು ಮಾಡಬೇಡಿ ಎಂದು ಯುವ ಬ್ರಿಗೇಡ್ ಕಾರ್ಯಕರ್ತರು ಭಕ್ತರಿಗೆ ಕರೆ ನೀಡಿದ್ದಾರೆ. ಯುವಾ ಬ್ರಿಗೇಡ್ ರಾಜ್ಯ ಸಂಚಾಲಕರಾದ ಬೆಂಗಳೂರಿನ ಚಂದ್ರಶೇಖರ್, ರಾಜ್ಯದ ಅನೇಕ ಕಡೆಗಳಲ್ಲಿ ನದಿಗಳು ಹಾಗೂ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದಾಗಿ ಗದಗದಲ್ಲಿ ಬತ್ತಿ ಹೋದ ಕೆರೆಯಲ್ಲಿ ಈಗ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಹೇಳಿದರು. ರಾಜ್ಯದೆಲ್ಲೆಡೆ ಯುವಾ ಬ್ರಿಗೇಡ್‌ನ ಮೂರು ಸಾವಿರ ಕಾರ್ಯಕರ್ತರು ನದಿಗಳ ಸ್ವಚ್ಛತಾ ಅಭಿಯಾನದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.







