ರಾಜ್ಯಮಟ್ಟದ ಕವಿಮೇಳಕ್ಕೆ ಕವನಗಳ ಆಹ್ವಾನ
ಮಂಡ್ಯ, ಜೂ.3: ನಾಗಮಂಗಲದ ಹಾರ್ಟ್ (ಹೆಲ್ತ್, ಎಜುಕೇಷನ್, ಅವೆರ್‍ನೆಸ್ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್) ಸಂಸ್ಥೆಯು ತನ್ನ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಯುವ ಬರಹಗಾರರ ಬಳಗದ ಸಹಯೋಗದಲ್ಲಿ ಪದ್ಮಭೂಷಣ ದಿವಗಂತ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ರಾಜ್ಯಮಟ್ಟದ ಕವಿಮೇಳವನ್ನು ಜುಲೈ ತಿಂಗಳು ನಾಗಮಂಗಲ ಪಟ್ಟಣದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ನಾಡಿನ ಕವಿ-ಕವಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಬಳಗದ ಜಿಲ್ಲಾಧ್ಯಕ್ಷ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿದ, ತಮ್ಮ ಸ್ವ-ರಚಿತ 20 ಸಾಲುಗಳ ಮಿತಿಯೊಳಗಿನ ಎರಡು ಕವಿತೆಗಳನ್ನು ಅಥವಾ 6 ಸಾಲಿನ ಮಿತಿಯೊಳಗಿನ ಆರು ಚುಟುಕು/ಹನಿಗವಿತೆಗಳನ್ನು ಸಂಘಟಕರಿಗೆ ಕಳುಹಿಸಿಕೊಡಬೇಕು. ಆಯ್ಕೆಯಾದ ಕವಿತೆಗಳ ಕವಿಗಳಿಗೆ ರಾಜ್ಯ ಮಟ್ಟದ ಕವಿಮೇಳದಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಭಾಗವಹಿಸುವ ಎಲ್ಲಾ ಕವಿಗಳಿಗೂ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ಜೂನ್ 25ರೊಳಗೆ ತಲುಪುವಂತೆ ಸ್ವರಚಿತ ಎರಡು ಕವಿತೆಗಳನ್ನು ತಮ್ಮ ಸಂಕ್ಷಿಪ್ತ ಪರಿಚಯದೊಂದಿಗೆ ಬಿ.ಸಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ, ಹಾರ್ಟ್ ಸಂಸ್ಥೆ, ಮನೆ.ನಂ.141, ‘ತವರು ಮನೆ’, ಕುವೆಂಪು ನಗರ, ನಾಗಮಂಗಲ ಟೌನ್-571432, ಮಂಡ್ಯ ಜಿಲ್ಲೆ- ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.9844179380, 9880264678 ಸಂಪರ್ಕಿಸಬಹುದು.







