ಬೇನಾಮಿ ಆಸ್ತಿ ಮುಟ್ಟುಗೋಲು ಪ್ರಕರಣ: ಕೋಟ್ಯಂತರ ಮೌಲ್ಯದ ಪ್ರಕರಣ ಅನೂರ್ಜಿತಗೊಳ್ಳುವ ಸಾಧ್ಯತೆ
ಹೊಸದಿಲ್ಲಿ, ಜೂ.3: ಕಾಳಧನ ಹಾಗೂ ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಬೇನಾಮಿ ಆಸ್ತಿ ಮುಟ್ಟುಗೋಲು ಪ್ರಕರಣದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಕೋಟ್ಯಂತರ ರೂಪಾಯಿ ವೌಲ್ಯದ 780 ಪ್ರಕರಣಗಳು ಮುಂದಿನ ದಿನದಲ್ಲಿ ಅನೂರ್ಜಿತಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1988ರಲ್ಲಿ ಜಾರಿಗೊಳಿಸಲಾದ ಬೇನಾಮಿ ಆಸ್ತಿ ವ್ಯವಹಾರ ಕಾಯ್ದೆಯನ್ನು 2016ರಲ್ಲಿ ಕೇಂದ್ರ ಸರಕಾರ ಪುನರೂರ್ಜಿತಗೊಳಿಸಿ ಜಾರಿಗೊಳಿಸಿತ್ತು. ಈ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಏಳು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮೌಲ್ಯದ ಶೇ.25ರಷ್ಟು ಮೊತ್ತದ ದಂಡ ವಿಧಿಸಲು ಅವಕಾಶವಿದೆ. ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಆಸ್ತಿಗಳ ಸಿಂಧುತ್ವದ ಬಗ್ಗೆ ನಿರ್ಧರಿಸಲು ಸರಕಾರವು ಮೂವರು ಸದಸ್ಯರ ನ್ಯಾಯನಿರ್ಣಯ ಪ್ರಾಧಿಕಾರವನ್ನು ನೇಮಿಸಬೇಕಿದೆ.
ಕಾನೂನಿನ ಪ್ರಕಾರ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಪ್ರಕರಣದಲ್ಲಿ ಸಿಂಧುತ್ವನ್ನು ಒಂದು ವರ್ಷದ ಒಳಗೆ ನಿರ್ಧರಿಸಬೇಕಿದೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ಸರಕಾರ ಈ ಕಾರ್ಯವನ್ನು ಹಂಗಾಮಿ ಪ್ರಾಧಿಕಾರಕ್ಕೆ ವಹಿಸಿಕೊಟ್ಟಿದೆ. ಸಿಬ್ಬಂದಿಗಳ ಕೊರತೆಯಿಂದ ಹಾಗೂ ನೋಟು ರದ್ದತಿಯ ಬಳಿಕ ಹೆಚ್ಚಿರುವ ಕಾರ್ಯದ ಒತ್ತಡದಿಂದ ಹಂಗಾಮಿ ಪ್ರಾಧಿಕಾರದ ಕಾರ್ಯ ಕುಂಟುತ್ತಾ ಸಾಗಿದೆ. ತನಗೆ ವಹಿಸಿರುವ 860ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 80 ಪ್ರಕರಣಗಳ ಸಿಂಧುತ್ವವನ್ನು ನಿರ್ಧರಿಸಲು ಸಾಧ್ಯವಾಗಿದೆ. ಪ್ರಾಧಿಕಾರ ಬೇನಾಮಿ ಪ್ರಕರಣಗಳ ಸಿಂಧುತ್ವವನ್ನು ನಿರ್ಧರಿತ ಸಮಯದಲ್ಲಿ ನಿರ್ಧರಿಸಲು ವಿಫಲವಾದರೆ ಅದೊಂದು ಪ್ರಮುಖ ವಿವಾದವಾಗಬಹುದು ಹಾಗೂ ಸರಕಾರಕ್ಕೆ ಮುಜುಗುರ ತರಬಹುದು ಎಂದು ವಿತ್ತ ಸಚಿವಾಲಯದ ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಿರುವ ನ್ಯಾಯನಿರ್ಣಯ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಮಾರ್ಚ್ 31ರಂದು ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಎಪ್ರಿಲ್ 1ರಿಂದ ಪ್ರಾಧಿಕಾರವು ಪೂರ್ಣಪ್ರಮಾಣದ ಅಧ್ಯಕ್ಷರಿಲ್ಲದೆ ಕಾರ್ಯ ನಿರ್ವಹಿಸಬೇಕಾಗಿದೆ.







