ಪ್ರಾಚೀನ ವಸ್ತುಗಳನ್ನು ಮರಳಿ ತರಲು ನಡೆಸಿದ ಪ್ರಯತ್ನದ ಮಾಹಿತಿ ನೀಡಲು ಸಚಿವಾಲಯಕ್ಕೆ ಸೂಚನೆ
ಹೊಸದಿಲ್ಲಿ, ಜೂ.3: ಕೊಹಿನೂರ್ ವಜ್ರ, ಮಹಾರಾಜ ರಣಜಿತ್ ಸಿಂಗ್ ಅವರ ಸ್ವರ್ಣ ಸಿಂಹಾಸನ, ಶಹಜಹಾನ್‌ರ ರಾಯಲ್ ಜೇಡ್ ವೈನ್ ಗ್ಲಾಸ್ , ಟಿಪ್ಪು ಸುಲ್ತಾನರ ಖಡ್ಗ ಮುಂತಾದ ಭಾರತದ ಅಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ದೇಶಕ್ಕೆ ಮರಳಿ ತರಲು ಕೈಗೊಂಡಿರುವ ಪ್ರಯತ್ನಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ಪ್ರಧಾನ ಮಂತ್ರಿ ಸಚಿವಾಲಯ ಹಾಗೂ ವಿದೇಶ ವ್ಯವಹಾರ ಇಲಾಖೆಗೆ ತಿಳಿಸಿದೆ.
ವಸಾಹತುಶಾಹಿ ದೊರೆಗಳು ಹಾಗೂ ದಾಳಿಕೋರರ ಕೈವಶವಾಗಿದ್ದ ಭಾರತದ ಈ ಅಮೂಲ್ಯ ಸಂಪತ್ತು ಬಳಿಕ ವಿಶ್ವದಾದ್ಯಂತದ ವಿವಿಧ ಮ್ಯೂಸಿಯಂಗಳನ್ನು ಸಿಂಗರಿಸಿದೆ. ಈ ವಸ್ತುಗಳನ್ನು ಮರಳಿ ತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಬಿ.ಕೆ.ಎಸ್.ಆರ್. ಅಯ್ಯಂಗಾರ್ ಎಂಬವರು ಪ್ರಧಾನಮಂತ್ರಿಗಳ ಕಚೇರಿ ಹಾಗೂ ವಿದೇಶ ವ್ಯವಹಾರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ಗೆ ವರ್ಗಾಯಿಸಲಾಗಿತ್ತು. ಆದರೆ , ಈ ವಸ್ತುಗಳನ್ನು ಮರಳಿ ತರುವ ಪ್ರಯತ್ನ ತಮ್ಮ ಇಲಾಖೆಯ ವ್ಯಾಪ್ತಿಗೆ ಸೇರಿಲ್ಲ ಎಂದು ಎಎಸ್‌ಐ ತಿಳಿಸಿತ್ತು .
1972ರಲ್ಲಿ ರೂಪಿಸಿ (1976ರಲ್ಲಿ ಜಾರಿಗೊಂಡ) ಪುರಾತತ್ವ ವಸ್ತು ಹಾಗೂ ಕಲಾ ಸಂಪತ್ತು ಉಲ್ಲಂಘನೆ ಕಾಯ್ದೆ ಜಾರಿಗೆ ಬಂದ ಬಳಿಕ ಭಾರತದಿಂದ ವಿದೇಶಗಳಿಗೆ ಸಾಗಿಸಲ್ಪಟ್ಟಿರುವ ಪುರಾತನ ಕಲಾಕೃತಿಗಳನ್ನು ಮರಳಿ ತರುವ ಕುರಿತ ಪ್ರಕರಣಗಳನ್ನು ಮಾತ್ರ ತಾನು ಗಮನಿಸುವುದಾಗಿ ಎಎಸ್‌ಐ ತಿಳಿಸಿತ್ತು. 2014ರಿಂದ 2017ರವರೆಗಿನ ಅವಧಿಯಲ್ಲಿ ವಿವಿಧ ದೇಶಗಳಿಂದ 25 ಪುರಾತನ ಕಲಾಕೃತಿಗಳನ್ನು ದೇಶಕ್ಕೆ ಮರಳಿ ತರಲಾಗಿದೆ ಎಂದು ತಿಳಿಸಲಾಗಿತ್ತು. ಕೊಹಿನೂರ್ ವಜ್ರ, ಸುಲ್ತಾನ್‌ಗಂಜ್ ಬುದ್ಧ, ನಸ್ಸಕ್ ವಜ್ರ, ಟಿಪ್ಪು ಸುಲ್ತಾನರ ಖಡ್ಗ ಮತ್ತು ಉಂಗುರ, ಮಹಾರಾಜ ರಣಜಿತ್ ಸಿಂಗ್‌ರ ಸ್ವರ್ಣ ಸಿಂಹಾಸನ, ಶಹಜಹಾನರ ರಾಯಲ್ ಜೇಡ್ ವೈನ್ ಗ್ಲಾಸ್, ಅಮರಾವತಿ ಕುಸುರಿಕೆತ್ತನೆಗಳು ಹಾಗೂ ಬುದ್ಧಪಾದ, ಸರಸ್ವತಿಯ ಅಮೃತಶಿಲೆಯ ವಿಗ್ರಹ, ಟಿಪ್ಪು ಸುಲ್ತಾನರ ಯಾಂತ್ರಿಕ ಹುಲಿ- ಇವುಗಳ ಕುರಿತು ಅಯ್ಯಂಗಾರ್ ತಮ್ಮ ಅರ್ಜಿಯಲ್ಲಿ ವಿವರ ಕೋರಿದ್ದರು.
ಈ ಪುರಾತನ ವಸ್ತುಗಳ ಬಗ್ಗೆ ಜನತೆ ಭಾವನಾತ್ಮಕ ನಂಟು ಹೊಂದಿದ್ದು ಭೋಜರಾಜರ ಕಾಲದ ವಾಗ್ದೇವಿ ವಿಗ್ರಹ, ಸುಲ್ತಾನ್‌ಗಂಜ್‌ನ ಬುದ್ಧ ವಿಗ್ರಹ ಮುಂತಾದವು ಧಾರ್ಮಿಕವಾಗಿ ಅತ್ಯಂತ ಪವಿತ್ರ ಎಂದು ಪರಿಗಣಿಸಲ್ಪಟ್ಟರೆ, ಟಿಪ್ಪು ಸುಲ್ತಾನರ ಖಡ್ಗ, ಯಾಂತ್ರಿಕ ಹುಲಿ ಮುಂತಾದವು ಅತ್ಯುನ್ನತ ಐತಿಹಾಸಿಕ ವೌಲ್ಯಗಳನ್ನು ಹೊಂದಿವೆ ಎಂದು ಮಾಹಿತಿ ಹಕ್ಕು ಆಯುಕ್ತ ಶ್ರೀಧರ್ ಆಚಾರ್ಯುಲು ತಿಳಿಸಿದ್ದಾರೆ. ಈ ಪ್ರಾಚೀನ ವಸ್ತುಗಳು ನ್ಯಾಯಸಮ್ಮತವಾಗಿ ಭಾರತಕ್ಕೆ ಸೇರುತ್ತವೆ. ದೇಶದ ಹಿಂದಿನ, ಇಂದಿನ ಮತ್ತು ಮುಂದಿನ ಪೀಳಿಗೆಯ ಜನರು ಇವನ್ನು ಮರಳಿ ಪಡೆಯುವ ಬಗ್ಗೆ ಆಸಕ್ತರಾಗಿದ್ದಾರೆ. ಆದ್ದರಿಂದ ಈ ಕುರಿತ ಮಾಹಿತಿ ಹಕ್ಕು ಕಾಯ್ದೆಯಡಿಯ ಕೋರಿಕೆ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸರಕಾರ ನಿರ್ಲಕ್ಷಿಸುವಂತಿಲ್ಲ ಎಂದು ಆಚಾರ್ಯುಲು ಹೇಳಿದ್ದಾರೆ. ಈ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಎಎಸ್‌ಐಗೆ ವರ್ಗಾಯಿಸುವ ಮೊದಲು ಪ್ರಧಾನ ಮಂತ್ರಿಗಳ ಕಚೇರಿ, ಸಾಂಸ್ಕೃತಿಕ ಇಲಾಖೆ ಸ್ವಲ್ಪ ಯೋಚಿಸಬೇಕಿತ್ತು . ಸುಪ್ರೀಂಕೋರ್ಟ್‌ಗೆ ಈ ಹಿಂದೆ ಮಾಹಿತಿ ನೀಡಿದ್ದ ಸಾಂಸ್ಕೃತಿಕ ಇಲಾಖೆ , ಪುರಾತನ ವಸ್ತುಗಳನ್ನು ಮರಳಿ ತರುವ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿತ್ತು. ಆದ್ದರಿಂದ ಈ ಕುರಿತು ನಡೆದಿರುವ ಪ್ರಯತ್ನಗಳ ಬಗ್ಗೆ ಅವರು ಮಾಹಿತಿ ನೀಡಬೇಕಿತ್ತು ಎಂದು ಆಚಾರ್ಯುಲು ತಿಳಿಸಿದ್ದಾರೆ.
ಅರ್ಜಿದಾರರಿಗೆ ಮಾಹಿತಿ ನೀಡುವುದು ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ಸಾಂಸ್ಕೃತಿಕ ಇಲಾಖೆಯ ಕರ್ತವ್ಯವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿಯ ಅರ್ಜಿಯನ್ನು ಎಎಸ್‌ಐಗೆ ವರ್ಗಾಯಿಸುವುದರ ಮೂಲಕ ಈ ಎರಡೂ ಇಲಾಖೆಗಳು ಕರ್ತವ್ಯಲೋಪ ಎಸಗಿವೆ ಎಂದು ತಿಳಿಸಿರುವ ಆಚಾರ್ಯುಲು, ತಕ್ಷಣ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಪ್ರಧಾನ ಮಂತ್ರಿ ಸಚಿವಾಲಯ, ಸಾಂಸ್ಕೃತಿಕ ಇಲಾಖೆ ಹಾಗೂ ವಿದೇಶ ವ್ಯವಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಮಾಹಿತಿ ಹಕ್ಕು ಅರ್ಜಿಯನ್ನು ಎಎಸ್‌ಐಗೆ ವರ್ಗಾಯಿಸಿದ ಬಗ್ಗೆ ವಿವರ ನೀಡುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಸೂಚಿಸಿದ್ದಾರೆ.







