ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪ: ತಮಿಳು ನಟಿಯ ಬಂಧನ
ಚೆನ್ನೈ, ಜೂ.4: ನಗರದ ಹೊರವಲಯದಲ್ಲಿರುವ ರೆಸಾರ್ಟ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಪೊಲೀಸರು ತಮಿಳು ನಟಿ ಸಂಗೀತಾ ಬಾಲನ್ ಎಂಬವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಗೀತಾ ಹಾಗೂ ಆಕೆಯ ಸಹಭಾಗಿ ಸತೀಶ್ ಎಂಬವರನ್ನು ಬಂಧಿಸಿ ಎಗ್ಮೋರ್ನ ಪ್ರಧಾನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು ಇಬ್ಬರಿಗೂ 15 ದಿನದ ಸೆರೆವಾಸ ವಿಧಿಸಲಾಗಿದೆ. ಪಣೈಯೂರಿನ ಈಸ್ಟ್ ಕೋಸ್ಟ್ ರಸ್ತೆಯಲಿರುವ ಖಾಸಗಿ ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೆಸಾರ್ಟ್ಗೆ ದಾಳಿ ನಡೆಸಲಾಗಿದೆ. ಈ ವೇಳೆ ನಾಲ್ವರು ಯುವತಿಯರು ಈ ದಂಧೆಯಲ್ಲಿ ಒಳಗೊಂಡಿರುವುದು ತಿಳಿದು ಬಂದಿದೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸಂಗೀತಾ ಬಾಲನ್ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಈ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ದೊರೆತಿದೆ ಎಂದು ಪೊಲೀಸ್ ಇಲಾಖೆಯ ಅಕ್ರಮ ವ್ಯವಹಾರ ತಡೆ ದಳದ ಇನ್ಸ್ಪೆಕ್ಟರ್ ಮಹಾಲಕ್ಷ್ಮೀ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಗೀತಾ ಬಾಲನ್ ಮತ್ತು ಸತೀಶ್ ಯುವತಿಯರಿಗೆ ಅಪಾರ ಹಣ ಹಾಗೂ ಸಿನೆಮ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ ಬಲೆಗೆ ಕೆಡವಿಕೊಳ್ಳುತ್ತಿದ್ದರು ಎಂದು ಸಂತ್ರಸ್ತ ಯುವತಿಯರು ತಿಳಿಸಿದ್ದಾರೆ. ಯುವತಿಯರನ್ನು ಮೈಲಾಪುರದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 1996ರಲ್ಲಿ ಬಿಡುಗಡೆಯಾದ ‘ಕರಪ್ಪು ರೋಜ’ ಎಂಬ ಸಿನೆಮದಲ್ಲಿ ನಟಿಸಿದ್ದ ಸಂಗೀತಾ, ಟಿವಿ ಧಾರಾವಾಹಿಗಳ ಜನಪ್ರಿಯ ನಟಿಯಾಗಿದ್ದಾರೆ. ವಾಣಿ-ರಾಣಿ, ಚೆಲ್ಲಮಯ್ ಅವಳ್, ಸಬಿತಾ ಅಲಿಯಾಸ್ ವಲ್ಲಿ - ಸಂಗೀತಾ ನಟಿಸಿರುವ ಕೆಲವು ಜನಪ್ರಿಯ ಧಾರಾವಾಹಿಗಳಾಗಿವೆ.