ಕೋರ್ಟ್ ಆದೇಶ ಪಾಲಿಸಲಾಗದು ಎಂದ ಅಧಿಕಾರಿಯ ಮಾತಿಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಜೂ.4: ರಾಜ್ಯ ಸರಕಾರದ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು ನ್ಯಾಯಪೀಠದ ಮುಂದೆ ನಿಂತು, ನೀವು ಹೊರಡಿಸಿರುವ ಆದೇಶ ಪಾಲಿಸಲಾಗದು ಎಂದು ಹೇಳುತ್ತಾರೆ. ಕಾನೂನು ಪ್ರಕಾರ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳೇ ಕೋರ್ಟ್‌ಗೆ ಇಂತಹ ಮಾತುಗಳನ್ನು ಹೇಳುತ್ತಾರೆ. ಇಂಥ ಅಧಿಕಾರಿಗಳನ್ನು ಇಟ್ಟುಕೊಂಡ ಸರಕಾರವನ್ನು ದೇವರೇ ಕಾಪಾಡಬೇಕೆಂಬ ಅಸಮಾಧಾನದ ಮಾತುಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಆಡಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಡಿ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ನೀಡಲು ಹೈಕೋರ್ಟ್ ಈ ಹಿಂದೆ ಸರಕಾರಕ್ಕೆ ಆದೇಶಿಸಿತ್ತು. ಆ ಪ್ರಕರಣ ಸೋಮವಾರ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆಗೆ ಹಾಜರಿದ್ದ ಸರಕಾರದ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು, ನ್ಯಾಯಾಲಯ ಹೊರಡಿಸಿದ ಆದೇಶ ಪಾಲಿಸಲಾಗದು. ಆದೇಶ ಪಾಲಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿಲ್ಲ. ಹೀಗಾಗಿ ನಾವೇನು ಮಾಡಲಾಗದು ಎಂದು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಉತ್ತರಿಸಿದ್ದರು. ಹೀಗಾಗಿ, ನ್ಯಾಯಮೂರ್ತಿಗಳು ಇಂಥ ಅಧಿಕಾರಿಗಳನ್ನು ಇಟ್ಟುಕೊಂಡ ಸರಕಾರವನ್ನು ದೇವರೇ ಕಾಪಾಡಬೇಕೆಂಬ ಅಸಮಾಧಾನದ ಮಾತುಗಳನ್ನು ಆಡಿದರು.
ಕೋರ್ಟ್ ಎದುರು ಇಂತಹ ಹೇಳಿಕೆ ನೀಡಬಾರದು ಎಂಬುದಾಗಿ ಹೆಚ್ಚುವರಿ ಕಾರ್ಯದರ್ಶಿಗೆ ವಿಚಾರಣೆಗೆ ಹಾಜರಿದ್ದ ಸರಕಾರಿ ವಕೀಲರು ಸಲಹೆ ನೀಡಲಿಲ್ಲ. ಸರಕಾರಿ ವಕೀಲರ ಈ ಕಾರ್ಯ ವೈಖರಿ ಸಮಂಜಸವಲ್ಲ ಹಾಗೂ ನ್ಯಾಯಾಲಯ ಸಹಿಸುವುದೂ ಇಲ್ಲ. ಇಂತಹವರು ಈ ನೆಲದ ಕಾನೂನಿಗೆ ಅಪಾಯಕಾರಿ. ಈ ಘಟನೆ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ಗಮನಕ್ಕೆ ತರಲಾಗುವುದು ಎಂದು ಕಠೋರವಾಗಿ ನುಡಿದರು.







