‘ಆರೋಹಣ ಕೊಡಗು’ ತಂಡದ ಪರಿಸರ ಕಾಳಜಿ : ಚಾರಣದೊಂದಿಗೆ ಪರಿಸರ ಸ್ವಚ್ಛತೆ

ಮಡಿಕೇರಿ, ಜೂ.4 :ಜೂನ್-5 ವಿಶ್ವ ಪರಿಸರ ದಿನಾಚರಣೆ, ನಮ್ಮನ್ನು ಸಂರಕ್ಷಿಸುತ್ತಿರುವ ಪರಿಸರವನ್ನು ಉಳಿಸುವುದು, ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಕೊಡಗಿನ ಚಾರಣ ತಂಡವೊಂದು “ಪ್ರಕೃತಿಯೆಡೆಗೆ ನಮ್ಮ ನಡಿಗೆ” ಎಂಬ ಘೋಷ ವಾಕ್ಯದೊಂದಿಗೆ ಚಾರಣ ಕೈಗೊಳ್ಳೂವ ಸಂದರ್ಭ ಪ್ರವಾಸಿಗರಿಂದ ಕಲುಷಿತಗೊಳ್ಳುತ್ತಿರುವ ಕೊಡಗಿನ ಪರಿಸರವನ್ನು ಸ್ವಚ್ಛಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ. ವಿಶ್ವ ಪರಿಸರ ದಿನಾಚರಣೆಯ ಸಂದರ್ಭ ಪ್ರಕೃತಿಯ ಬಗ್ಗೆ ಕಾಳಜಿಯನ್ನು ಹೊಂದಿರುವ ಈ ತಂಡವನ್ನು ಶ್ಲಾಘಿಸಲೇಬೇಕು.
‘ಆರೋಹಣ ಕೊಡಗು’ ಇದು ಮಡಿಕೇರಿಯ ಯೋಗಾಸಕ್ತರು ಪ್ರಕೃತಿ ಪ್ರೇಮಿಗಳನ್ನೊಳಗೊಂಡ ಒಂದು ತಂಡ, ಯೋಗಾಭ್ಯಾಸ, ಕೊಡಗಿನ ಬೆಟ್ಟಗುಡ್ಡಗಳಿಗೆ ಚಾರಣ, ಪ್ರಕೃತಿ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವುದು, ತಂಡದ ಪ್ರಮುಖ ಉದ್ದೇಶಗಳು. ‘ಆರೋಹಣ ಕೊಡಗು’ ಆರಂಭಗೊಂಡು ಒಂದು ವರ್ಷ ಪೂರೈಸಿದರೂ ಬಿಡುವಿನ ಸಮಯದಲ್ಲಿ ಕೈಗೊಂಡ ಕಾರ್ಯಕ್ರಮಗಳು ಅಪಾರ. ವಿಶೇಷವಾಗಿ ತಿಂಗಳಿಗೊಮ್ಮೆ ಯೋಗ ನಡಿಗೆ, ಮಳೆಗಾಲದಲ್ಲಿ ಪ್ರಕೃತಿ ನಡಿಗೆ, ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ವಿಶ್ವ ಪರಿಸರ ದಿನಾಚರಣೆಯ ಸಂದರ್ಭ ಈ ತಂಡದ ಪರಿಸರ ಕಾಳಜಿ ಹೊಂದಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ತಂಡ ಆಯೋಜಿಸುವಂತಹ ಚಾರಣಗಳಿಗೆ ತೆರಳುವ ಚಾರಣಿಗರು ಆಯಾ ಪ್ರದೇಶದಲ್ಲಿ ಪ್ರವಾಸಿಗರಿಂದ ಕಲುಷಿತಗೊಂಡ ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ.
ಇತ್ತೀಚೆಗೆ ಮಾಂದಲಪಟ್ಟಿಗೆ ತೆರಳಿದ ಸಂದರ್ಭ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಎಸೆದಿರುವ ನೀರಿನ ಬಾಟಲಿಗಳನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದ್ದಾರೆ. ಹಾಗೇ ಕೋಟೆ ಬೆಟ್ಟ, ಕೋಟೆ ಅಬ್ಬಿ, ತಲಕಾವೇರಿ ಸುತ್ತಮುತ್ತ ಹಾಗೂ ಇತರ ಪ್ರವಾಸೀಯ ಸ್ಥಳಗಳಿಗೆ ತಂಡ ಚಾರಣ ಕೈಗೊಂಡಾಗ, ಅಲ್ಲಿನ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿದೆ. ಹಾಗೆಯೇ ಪ್ರಕೃತಿ ಮಾತೆಯನ್ನು ಕಲುಷಿತಗೊಳಿಸಬಾರದೆಂಬ ಉದ್ದೇಶದಿಂದ ತಂಡದ ಸದಸ್ಯರಿಗೆ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಕೆಲಸಗಳನ್ನು ‘ಆರೋಹಣ ಕೊಡಗು’ ಮಾಡುತ್ತಿದೆ.
ಮಡಿಕೇರಿಯ ಯೋಗ ಗುರು ಕೆ.ಕೆ. ಮಹೇಶ್‍ಕುಮಾರ್ ಮತ್ತು ಅಶ್ವಿನ್ ಜುವೆಲ್ಲರ್ಸ್‍ನ ಮಾಲೀಕರಾದ ಇ.ಎಲ್. ಸುರೇಶ್‍ಕುಮಾರ್ ಅವರ ನೇತೃತ್ವದಲ್ಲಿ ಸುಮಾರು 100 ಸದಸ್ಯರನ್ನೊಳಗೊಂಡ ಸಮಾನ ಮನಸ್ಕರ ತಂಡ ಚಾರಣದೊಂದಿಗೆ ಪರಿಸರವನ್ನು ಸ್ವಚ್ಛಗೊಳಿಸುವ, ಪ್ರಕೃತಿಯ ಸಂರಕ್ಷಣೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಇರಾದೆಯನ್ನು ಹೊಂದಿದೆ.







