ಕಾಪು : ದಲಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದ ಪೊಲೀಸರು

ಕಾಪು, ಜೂ. 5: ಸದಾ ತಮ್ಮ ಒತ್ತಡದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪೊಲೀಸರು ತಮ್ಮ ಒಂದು ದಿನದ ವೇತನದಲ್ಲಿ 38 ದಲಿತ ಬಡ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಪು ಪೊಲೀಸ್ ಠಾಣೆಯ ಉಪನರೀಕ್ಷಕ ನಿತ್ಯಾನಂದ ಗೌಡ ಅವರ ನೇತೃತ್ವದಲ್ಲಿ ಪೊಲೀಸರು ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು.
ಇತ್ತೀಚೆಗೆ ಕೋತ್ವಾಲ್ ಕಟ್ಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ದಲಿತರ ಕಷ್ಟಗಳಿಗೆ ಕಿವಿಯಾದ ಪೋಲೀಸರು ಇವರಿಗಾಗಿ ಏನಾದರೂ ಮಾಡಬೇಕೆಂಬ ನಿರ್ಣಯಕ್ಕೆ ಬಂದು ಸ್ಥಳಿಯ ದಲಿತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸುವ ಸಂಕಲ್ಪ ಮಾಡಿದ್ದಾರೆ. ಠಾಣೆಯ ಎಲ್ಲಾ ಸಿಬಂದಿಗಳು ತಮ್ಮ ಒಂದು ದಿನದ ವೇತನವನ್ನು ಇದಕ್ಕಾಗಿ ನೀಡಲು ಮುಂದೆ ಬಂದಿದ್ದು ಅದರಿಂದ ಸುಮಾರುಬಡ ದಲಿತ ಮಕ್ಕಳಿಗೆ ಸೋಮವಾರ ಸಂಜೆ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮತನಾಡಿದ ಠಾಣಾಕಾರಿ ನಿತ್ಯಾನಂದ ಗೌಡ, ಶಾಲೆ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಒಂದಿಷ್ಟು ಪುಸ್ತಕ ಕೊಟ್ಟರೆ ಹೆತ್ತವರಿಗೂ ಸಹಾಯವಾದೀತು ಎಂಬ ಅಭಿಪ್ರಾಯ ಬಂದಿದ್ದರಿಂದ ಬೀಟ್ ಪೋಲೀಸರ ಮೂಲಕ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಪುಸ್ತಕ ವಿತರಿಸಿದ್ದೇವೆ. ಬಡ ಅಸಹಾಯಕ ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಮುಂದೆ ಬರಬೇಕೆಂಬ ಕಾಳಜಿಯಿಂದ ಇದನ್ನು ಮಾಡಿದ್ದೇವೆ. ಪೋಲೀಸರು ಮತ್ತು ಸಾರ್ವಜನಿಕರ ಬಾಂಧವ್ಯ ವೃದ್ಧಿಗೂ ಇದರಿಂದ ಸಹಾಯವಾಗಲಿದೆ ಎಂದರು.
ದೈವಸ್ಥಾನದ ಮುಖಂಡರಾದ ಸದಾಶಿವ, ಅಣ್ಣಯ್ಯ, ಪತ್ರಕರ್ತ ಬಾಲಕೃಷ್ಣ ಉಚ್ಚಿಲ, ಸಿಬಂದಿಗಳಾದ ಸಂದೇಶ್, ರಮೇಶ್ ಹಾಗೂ ಹಮೀದ್ ಉಪಸ್ಥಿತರಿದ್ದರು.







