ಪರಿಸರ ಸಂರಕ್ಷಿಸುವುದು ಧಾರ್ಮಿಕ ಕಾರ್ಯವೆಂದು ತಿಳಿಯಬೇಕು: ವೆಂಕಟೇಶ್ ನಾವುಡಾ

ಭಟ್ಕಳ, ಜೂ. 5: ಪರಿಸರ ಸಂರಕ್ಷಣೆ ಕಾರ್ಯವು ಧಾರ್ಮಿಕ ಕಾರ್ಯಗಳೆಂದು ತಿಳಿದಾಗ ನಮ್ಮ ಪರಿಸರವನ್ನು ಸಂರಕ್ಷಿಸಲು ಸಾಧ್ಯವೆಂದು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ ಹೇಳಿದರು.
ಅವರು ಮಂಗಳವಾರ ಜಾಮಿಯಾಬಾದ್ ನಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಆಂಗವಾಗಿ ಆಯೋಜಿಸಿದ್ದ ತರಗತಿಗೊಂದು ಮರಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿರು.
ನಮ್ಮಲ್ಲಿ ಜನರು ಧಾರ್ಮಿಕ ಕಾರ್ಯಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಾರೆ. ಆದರೆ ಅದೇ ಧಾರ್ಮಿಕತೆಯ ಹೆಸರಲ್ಲಿ ಪರಿಸರವನ್ನು ನಾಶಮಾಡುವಂತಹ ಹಲವಾರು ಕಾರ್ಯಕ್ರಮ ನಡೆಯುತ್ತವೆ. ಪರಿಸರ ಸಂರಕ್ಷಣೆಯೂ ಒಂದು ಧಾರ್ಮಿಕ ಕಾರ್ಯವೆಂದು ಭಾವಿಸಿದಾಗ ನಿಜವಾಗಿಯೂ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷರಾದ ಎಂ.ಆರ್.ನಾಯ್ಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರವನ್ನು ಸಂರಕ್ಷಿಸುವ ಗುರಿ ಅಚಲವಾಗಿದ್ದಾಗ ನಮ್ಮ ಪರಿಸರವನ್ನು ಕಲೂಷಿತಗೊಳ್ಳದಂತೆ ನೋಡಿಕೊಳ್ಳಬಹುದಾಗಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ, ಪರಿಸರ ಸಂರಕ್ಷಣೆಗೆ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದಂತೆ ಇಸ್ಲಾಂ ಧರ್ಮ ಹೆಚ್ಚಿನ ಒತ್ತನ್ನು ನೀಡಿದೆ. ಮರಣ ಸನ್ನಿಹಿತಗೊಂಡ ಸಂದರ್ಭದಲ್ಲೂ ಒಂದು ಸಸಿಯನ್ನು ನೆಡುವಂತೆ ಪ್ರವಾದಿ ಮುಹಮ್ಮದ್ ಪೈಗಂಬರರು ಆದೇಶಿಸಿದ್ದು ಪರಿಸರಕ್ಕೆ ಅದು ಎಷ್ಟರ ಮಟ್ಟಿಗ ಮಹತ್ವ ನೀಡಿದೆ ಎನ್ನುವುದು ಸಾಬೀತು ಪಡಿಸುತ್ತದೆ ಎಂದ ಅವರು ಈ ಮಾತನ್ನು ದೇಶದ ವಿದ್ಯಾರ್ಥಿ ಸಮುದಾಯ ಅರ್ಥ ಮಾಡಿಕೊಂಡರ ಮುಂದಿನಗಳಲ್ಲಿ ಪರಿಸರ ದಿನಾಚಾರಣೆಯ ಅವಶ್ಯಕತೆ ಬೀಳದು, ಶಾಲೆಯ ಆವರಣದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಸಿಗಳನ್ನು ಹಾಕುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಮ್ಮ ಮುಂದಿ ನ ಯೋಜನೆಗಳನ್ನು ತಿಳಿಸಿದರು.
ಭಟ್ಕಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ಶಮ್ಸ್ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯ ಇಸ್ಮಾಯಿಲ್ ಝವರೇರ್ ಈ ಸಂದರ್ಭದಲ್ಲಿ ಮಾತನಾಡಿದರು.
ಶಮ್ಸ್ ಸ್ಕೂಲ್ ಬೋರ್ಡ್ ಅಧ್ಯಕ್ಷ ಕಾದಿರ್ ಮೀರಾ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸಿದ್ದೀಖ್ ಮೀರಾ, ಶಮ್ಸ್ ಸ್ಕೂಲ್ ಕಾರ್ಯದರ್ಶಿ ಮುಹಮ್ಮದ್ ತಲ್ಹಾ ಸಿದ್ದಿಬಾಪ, ಆಡಳಿತ ಮಂಡಳಿ ಸದಸ್ಯರಾದ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಸೈಯ್ಯದ್ ಹಸನ್ ಬರ್ಮಾವರ್, ಪುರಸಭೆ ಆರೋಗ್ಯಾಧಿಕಾರಿ ವಿಜಯ ಭಂಡಾರಕರ್ ಮತ್ತಿತರರು ಉಪಸ್ಥಿತಿದ್ದರು.
ವಿದ್ಯಾರ್ಥಿ ಕೌನ್ಸಿಲ್ ಸದಸ್ಯ ಕು.ಅಬುಲ್ ಖೈರ್ ಬಂಗಾಲಿ ಕಾರ್ಯಕ್ರಮ ನಿರೂಪಿಸಿದರು. ಸ್ಕೂಲ್ ಹೆಡ್ ಬಾಯ್ ಮುಹಮ್ಮದ್ ರುಕ್ನುದ್ದೀನ್ ವಂದಿಸಿದರು.







