ಮಂಡ್ಯ ಜಿಲ್ಲೆಯಾದ್ಯಂತ ಅರ್ಥಪೂರ್ಣ ಪರಿಸರ ದಿನಾಚರಣೆ

ಮಂಡ್ಯ, ಜೂ.5: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ, ಸಾರ್ವಜನಿಕರಿಗೆ ಪರಿಸರ ರಕ್ಷಣೆ ಮಹತ್ವ ತಿಳಿಸಲಾಯಿತು.
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸಿಬ್ಬಂದಿ ಜತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ತಹಸೀಲ್ದಾರ್ ಎಲ್.ನಾಗೇಶ್, ಮಂಡ್ಯ ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿ ನಿರ್ಮಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಕರೆ ನೀಡಿದರು.
ತಾಲೂಕು ಕಚೇರಿಯಿಂದ ಹಿಡಿದು ತಾಲೂಕಿನಾದ್ಯಂತ ಎಲ್ಲೆಡೆ ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿಸುವುದರ ಜೊತೆಗೆ ಎಲ್ಲೆಡೆ ಗಿಡ ನೆಟ್ಟು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಅರಣ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅವರ ಸಹಕಾರದಿಂದ ಎಲ್ಲೆಡೆ ಗಿಡ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಉಪ ವಿಭಾಗಾಧಿಕಾರಿ ಚಿದಾನಂದ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ, ಕಂದಾಯ ನಿರೀಕ್ಷಕರಾದ ಮಹೇಶ್, ಮಹೇಂದ್ರ, ಶಂಕರ್, ಉಪ ತಹಸೀಲ್ದಾರ್‍ಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಮರಗಳನ್ನು ಬೆಳೆಸಿ: ನ್ಯಾ.ಮನ್ಸೂರ್ ಅಹಮದ್ ಜಮಾನ್
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಎಂ.ಒ.ಬಿ ಗ್ರಾಮೀಣ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ತಗ್ಗಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮನ್ಸೂರ್ ಅಹಮದ್ ಜಮನ್ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಫಾಟಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಆರೋಗ್ಯವಂತರಾಗಿ ಜೀವಿಸಲು ಶುದ್ಧ ಗಾಳಿ ಅವಶ್ಯವಿದ್ದು ಅದನ್ನು ಪಡೆಯಲು ಹೆಚ್ಚು ಮರಗಳನ್ನು ಬೆಳೆಸಬೇಕು. ಎಲ್ಲರೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರವನ್ನು ಉಳಿಸಬೇಕೆಂದು ಜಮಾನ್ ಕರೆ ನೀಡಿದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಎನ್.ಶಿವರಾಜು ವಕೀಲ ಎಂ.ಗುರುಪ್ರಸಾದ್, ಎಸ್‍ಡಿಎಂಸಿ ಅಧಕ್ಷ ರಾಮಕೃಷ್ಣ, ಪ್ರಾಂಶುಪಾಲ ಕೆ.ಜಿ.ಗುರುಸ್ವಾಮಿ, ವಲಯ ಅರಣ್ಯಾಧಿಕಾರಿ ಕೆ.ಹರೀಶ್, ಹೀರೆಮಠ್ ರೇಣುಕಾರಾಧ್ಯ, ಎಂಒಬಿ ನಿರ್ದೇಶಕರಾದ ಸಿಸ್ಟರ್ ಫಿಂಟೋ ಮ್ಯಾಥ್ಯೂ, ದೇವರಾಜು, ಬಾಲರಾಜು, ಜಯರಾಮು, ಪುಟ್ಟಸ್ವಾಮಿ, ಇತರ ಗಣ್ಯರು ಹಾಜರಿದ್ದರು.







