ಅಕ್ರಮ ಮರಳು ಸಂಗ್ರಹ: 853 ಲೋಡ್ ಮರಳು ವಶಕ್ಕೆ
ಮಂಗಳೂರು, ಜೂ. 5: ಅಕ್ರಮವಾಗಿ ಮರಳುಗಾರಿಕೆ ನಡೆಸಿ, ಮರಳು ಸಂಗ್ರಹಿಸಿದ್ದ ಸ್ಥಳಗಳಿಗೆ ದಾಳಿ ಮಾಡಿದ ಬಜ್ಪೆ ಪೊಲೀಸರು ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಒಟ್ಟು 853 ಲೋಡ್ ಅಕ್ರಮ ಮರಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸಿ ಮರಳನ್ನು ದಾಸ್ತಾನಿರಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಬಜ್ಪೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ಈ ವೇಳೆ ಬಡಗುಳಿಪಾಡಿ ಗ್ರಾಮದಲ್ಲಿ 313 ಲೋಡ್, ಮೊಗರು ಗ್ರಾಮದ ನಾರ್ಲಪದವಿನಲ್ಲಿ 233ಲೋಡ್, ಮೂಡುಪೆರಾರ ಗ್ರಾಮದ ಚರ್ಚ್ ಬಳಿ 307ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳಿನ ಮೌಲ್ಯ 35ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮೇಲುಸ್ತುವಾರಿಯಲ್ಲಿ ಎಸಿಪಿ ಗೋಪಾಲಕೃಷ್ಣ ನಾಯಕ್, ಇನ್‌ಸ್ಪೆಕ್ಟರ್‌ಗಳಾದ ಕೆ. ಶ್ರೀನಿವಾಸ್, ಪರಶಿವಮೂರ್ತಿ ಮುಂದಾಳುತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯ ವೇಳೆ ಸೈಬರ್ ಪೊಲೀಸ್ ಠಾಣೆಯ ನಿರೀಕ್ಷಕ ರಾಜಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಬಿ.ಕೆ. ಮೂರ್ತಿ, ಕಂದಾಯ ಇಲಾಖೆಯ ಗ್ರಾಮ ಕರಣಿಕ ಮುತ್ತಪ್ಪ ಮತ್ತು ದಿನೇಶ್ ಹಾಗೂ ಮಂಗಳೂರು ಸಿಸಿಬಿ ಘಟಕದ ಪಿಎಸ್‌ಐ ಕಬ್ಬಳ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.







