ಮಡಿಕೇರಿ: ಸೌಹಾರ್ದ ಇಫ್ತಾರ್ ಕೂಟ

ಮಡಿಕೇರಿ, ಜೂ.5: ಮನುಷ್ಯ ಧರ್ಮ ಎಂಬುವುದು ಅತಿಶ್ರೇಷ್ಠವಾಗಿದ್ದು, ಉಪವಾಸದ ಅರ್ಥ ಭಗವಂತನ ಸಾಮೀಪ್ಯವೇ ಆಗಿದೆ, ಬದುಕನ್ನು ಪ್ರೀತಿಯಿಂದ ಆರಂಭಿಸಿ ಪ್ರೀತಿಯಿಂದಲೇ ಮುಗಿಸಬೇಕು ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕಿವಿ ಮಾತು ಹೇಳಿದ್ದಾರೆ.
ವಿರಾಜಪೇಟೆಯ ಮುಸ್ಲಿಂ ಒಕ್ಕೂಟದ ವತಿಯಿಂದ ನಡೆದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕಷ್ಟ, ಸುಖಗಳೊಂದಿಗೆ ಸಮಾಜದ ಒಳಿತಿಗಾಗಿ ಬದುಕುವ ಮಾರ್ಗವನ್ನು ಮನುಷ್ಯನಿಗೆ ತೋರಲು ಉಪವಾಸ ಸಹಕಾರಿಯಾಗಿದೆ ಎಂದರು. ಧರ್ಮಗಳೆಲ್ಲವೂ ಬಾಂಧವ್ಯದ ಸಂದೇಶವನ್ನು ಬಿತ್ತರಿಸಿವೆ. ಧರ್ಮದ ಅನುಯಾಯಿಗಳು ನೈಜ ಧರ್ಮವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಕರಾವಳಿ ವಲಯ ಸಂಚಾಲಕರಾದ ಅಕ್ಬರಲಿ ಉಡುಪಿಯವರು ರಮಝಾನ್ ಸಂದೇಶ ನೀಡಿದರು. ಮನುಷ್ಯರ ಮಧ್ಯೆ ಭಿನ್ನತೆ ಹಾಗೂ ಸಂಶಯದ ಬೀಜ ಬಿತ್ತುವ ಶಕ್ತಿಗಳಿಗೆ ಸಮಾಜವು ಉತ್ತಮ ಉತ್ತರ ನೀಡುವಂತಾಗಬೇಕು. ಯಾವುದೇ ಧರ್ಮ ಮನುಷ್ಯರನ್ನು ಕಡೆಗಣಿಸಲು ಕಲಿಸುವುದಿಲ್ಲ. ರಂಜಾನ್‍ನ ಉಪವಾಸ ವ್ರತವು ಮನುಷ್ಯನ ಬದುಕನ್ನು ಸಂಸ್ಕರಿಸುತ್ತದೆ ಮತ್ತು ಮನಸ್ಸಿಗೆ ಹತೋಟಿಯನ್ನು ನೀಡುತ್ತದೆ. ಎಲ್ಲಾ ಧರ್ಮಗಳ ಉದ್ದೇಶವು ಮನುಷ್ಯ ಹೃದಯಗಳನ್ನು ಒಂದುಗೂಡಿಸುವುದಾಗಿದೆ. ಆದರೆ ದುರದೃಷ್ಟವಶಾತ್ ಸೋಗಲಾಡಿತನದ ಧರ್ಮಾನುಯಾಯಿಗಳು ಸಮಾಜಕ್ಕೆ ಕಂಟಕವಾಗುತ್ತಿರುವುದು ವಿಷಾದನೀಯ ಎಂದು ಅಕ್ಬರಲಿ ಉಡುಪಿ ತಿಳಿಸಿದರು.
ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎ.ಪೂವಣ್ಣ ಈ ಸಂದರ್ಭ ಹಿತನುಡಿಗಳನ್ನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಪಿ.ಕೆ.ಮುಹಮ್ಮದ್ ಹಾಗೂ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ನಿಸಾರ್ ಅಹಮದ್ ಉಪಸ್ಥಿತರಿದ್ದರು.
ಆರ್.ಕೆ.ಅಹಮದ್ ತಾಹಾ ಖಿರಾಅತ್ ಪಠಿಸಿದರು. ಪಿ.ಕೆ.ಅಬ್ದುಲ್ ರೆಹೆಮಾನ್ ಸ್ವಾಗತಿಸಿದರು.







