ಸರ್ಬಿಯ ಚಳಿ ಬಿಡಿಸಿದ ಚಿಲಿ
ಫಿಫಾ ವಿಶ್ವಕಪ್ ಅಭ್ಯಾಸ ಪಂದ್ಯ: ಮೊರೊಕ್ಕೊಗೆ ಜಯ

ಝೂರಿಚ್, ಜೂ.5: ರಶ್ಯದಲ್ಲಿ ಜೂ.14 ರಿಂದ ಆರಂಭವಾಗಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಚಿಲಿ ತಂಡ ಸರ್ಬಿಯ ತಂಡವನ್ನು 1-0 ಅಂತರದಿಂದ ಮಣಿಸಿದೆ. ಮತ್ತೊಂದು ಪಂದ್ಯದಲ್ಲಿ ಮೊರೊಕ್ಕೊ ತಂಡ ಸ್ಲೋವಾಕಿಯ ವಿರುದ್ಧ 2-1 ಅಂತರದಿಂದ ಜಯ ದಾಖಲಿಸಿ ಗಮನಾರ್ಹ ಪ್ರದರ್ಶನ ನೀಡಿದೆ.
ಈ ವರ್ಷದ ವಿಶ್ವಕಪ್‌ನಲ್ಲಿ ಆಡುವುದರಿಂದ ವಂಚಿತವಾಗಿರುವ ಇಟಲಿ ಹಾಗೂ ಹಾಲೆಂಡ್ ತಂಡಗಳು ಟುರಿನ್‌ನಲ್ಲಿ ನಡೆದ ಪಂದ್ಯದಲ್ಲಿ 1-1 ರಿಂದ ಡ್ರಾ ಸಾಧಿಸಿ ಮೊದಲಿನ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ.
ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿ ಅಚ್ಚರಿ ಮೂಡಿಸಿರುವ ಚಿಲಿ ತಂಡದ ಪರ 89ನೇ ನಿಮಿಷದಲ್ಲಿ ಗುಲ್ಲೆರ್ಮೊ ಮರಿಪನ್ ಏಕೈಕ ಗೋಲು ಬಾರಿಸಿದರು.
ವಿಶ್ವಕಪ್‌ನಲ್ಲಿ ಇ ಗುಂಪಿನಲ್ಲಿ ಸ್ಥಾನ ಪಡೆದಿರುವ ಸರ್ಬಿಯ ತಂಡ ಗ್ರೂಪ್ ಹಂತದಲ್ಲಿ ಬ್ರೆಝಿಲ್, ಕೋಸ್ಟ ರಿಕಾ ಹಾಗೂ ಸ್ವಿಟ್ಝರ್ಲೆಂಡ್ ತಂಡಗಳನ್ನು ಮುಖಾಮುಖಿಯಾಗಲಿದೆ.
ಮೊರೊಕ್ಕೊ ತಂಡ ಸ್ಲೋವಾಕಿಯ ವಿರುದ್ಧ 2-1 ಅಂತರದಿಂದ ಜಯ ಸಾಧಿಸುವ ಮೂಲಕ ಸತತ 11ನೇ ಜಯ ಸಾಧಿಸಿ ಅಜೇಯ ಗೆಲುವಿನ ಓಟ ಮುಂದುವರಿಸಿತು.
20 ವರ್ಷಗಳ ಬಳಿಕ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಉತ್ತರ ಆಫ್ರಿಕದ ಮೊರೊಕ್ಕೊ ವಿಶ್ವಕಪ್ ‘ಬಿ’ ಗುಂಪಿನಲ್ಲಿ ಇರಾನ್, ಪೋರ್ಚುಗಲ್ ಹಾಗೂ ಸ್ಪೇನ್ ತಂಡವನ್ನು ಎದುರಿಸಲಿದೆ.
ಈ ವರ್ಷದ ವಿಶ್ವಕಪ್‌ನಿಂದ ವಂಚಿತವಾಗಿರುವ ಸ್ಲೋವಾಕಿಯ ತಂಡ 59ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಜಾನ್ಸ್ ಗ್ರೆಗಸ್ ತಂಡಕ್ಕೆ ಒದಗಿಸಿಕೊಟ್ಟ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. 5 ನಿಮಿಷಗಳ ಬಳಿಕ ಮೊರಾಕ್ಕೊದ ಅಯೂಬ್ ಕಾಬಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಮಿಡ್ ಫೀಲ್ಡರ್ ಯೂನಿಸ್ ಬೆಲ್‌ಥಂಡಿ 74ನೇ ನಿಮಿಷದಲ್ಲಿ ಗೋಲು ಬಾರಿಸಿ ಮೊರೊಕ್ಕೊಗೆ 2-1 ಮುನ್ನಡೆ ಒದಗಿಸಿಕೊಟ್ಟರು.
ಮೊರೊಕ್ಕೊ ಜೂ.9ರಂದು ತವರಿನಲ್ಲಿ ನಡೆಯಲಿರುವ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಇಸ್ಟೋನಿಯ ತಂಡವನ್ನು ಎದುರಿಸಲಿದೆ. ಜೂ.15 ರಂದು ಇರಾನ್ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿರುವ ಮೊರೊಕ್ಕೊ ತಂಡ ಜೂ.20 ರಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಎದುರಿಸಲಿದೆ. ಜೂ.25 ರಂದು ಸ್ಪೇನ್ ತಂಡದ ವಿರುದ್ಧ ಮೊದಲ ಸುತ್ತಿನ ಕೊನೆಯ ಪಂದ್ಯ ಆಡಲಿದೆ.







