ರಜನಿಕಾಂತ್ ಕಾವೇರಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ನೋವಾಗಿದೆ: ನಟ ಜಗ್ಗೇಶ್

ಮೈಸೂರು,ಜೂ.6: ತಮಿಳು ನಟ ರಜನಿಕಾಂತ್ ಕಾವೇರಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ನನಗೆ ವೈಯಕ್ತಿಕವಾಗಿ ನೋವಾಗಿದೆ ಎಂದು ನಟ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್ ಮೂರ್ತಿ ಪರ ಮತಯಾಚಿಸಿ ಮಾತನಾಡಿದರು.
ರಜನಿಕಾಂತ್ ಅವರನ್ನು ಡಾ.ರಾಜ್‍ಕುಮಾರ್ ರಂತೆ ಗೌರವಿಸಿದ್ದೆ. ಕಾವೇರಿ ವಿಚಾರ ಹಲವು ವರ್ಷಗಳಿಂದ ಇದೆ. ರಜನಿಕಾಂತ್ ರಾಜಕೀಯಕ್ಕೆ ಬಳಸಿಕೊಂಡಿರುವುದು ವೈಯಕ್ತಿಕವಾಗಿ ನೋವಾಗಿದೆ. ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆ ವಿಚಾರವಾಗಿ ಕನ್ನಡಿಗರು ಎರಡು ರೀತಿ ಪ್ರತಿಭಟನೆ ಮಾಡಬಹುದು. ಒಂದು ಮೌನವಾಗಿ, ಮತ್ತೊಂದು ಕಾಲಾ ಚಿತ್ರವನ್ನು ನೋಡದೆಯೇ ಪ್ರತಿಭಟಿಸಬೇಕು ಎಂದು ಹೇಳಿದರು.
ತಮಿಳು ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ಇವರಿಬ್ಬರೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಹಾದಿಯನ್ನು ತುಳಿಯುತ್ತಿದ್ದಾರೆ. ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಅಲ್ಲಿನ ರೈತರ ಭಾವನೆಗಳೊಂದಿಗ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾನಂತೂ ಕಾಲಚಿತ್ರವನ್ನು ನೋಡುವುದಿಲ್ಲ, ಹಾಗೆ ನನ್ನ ಅಭಿಮಾನಿಗಳು ಸಹ ನನ್ನ ಗುಣವನ್ನೇ ಅನುಸರಿಸುತ್ತಾರೆ ಅಂದುಕೊಂಡಿದ್ದೇನೆ. ರಜನಿ ಅವರನ್ನು ಕಳೆದ ಮೂರು ತಿಂಗಳ ಹಿಂದೆಯೇ ಟ್ವಿಟ್ಟರ್ ನಲ್ಲೂ ಅನ್‍ಫಾಲೋ ಮಾಡಿದ್ದೇನೆ. ಒಂದು ಮನೆಯಲ್ಲಿ ಐದು ಮಂದಿ ಒಂದೇ ರೀತಿ ಇರುವುದಿಲ್ಲ, ಅಂದ ಮೇಲೆ ಎಲ್ಲರೂ ನಮ್ಮಂತೆಯೇ ಯೋಚನೆ ಮಾಡಬೇಕು ಅನ್ನೋದು ಸರಿಯಲ್ಲ ಎಂದು ಹೇಳಿದರು.
ಶಿಕ್ಷಕರು ಸಾಮಾನ್ಯ ಮತದಾರರಂತೆ ಅಲ್ಲ, ಅವರು ಪ್ರಾಜ್ಞರು, ನಮ್ಮಂತಹ ಅದೆಷ್ಟೋ ಮಂದಿಗೆ ತಿದ್ದಿ ಬುದ್ದಿ ಹೇಳಿ ಮೇಲೆ ತಂದವರು ಹಾಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್‍ಮೂರ್ತಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪ್ರೊ.ಜಿ.ಸಿ.ರಾಜಣ್ಣ, ನಿವೃತ್ತ ಪ್ರಾಂಶುಪಾಲ ಮಹದೇವ್, ಕೇಂದ್ರ ಸೆನ್ಸಾರ್ ಬೋರ್ಡ್ ಸದಸ್ಯೆ ಲಕ್ಷೀ, ಮಂಜು ಸಿ.ಗೌಡ, ಮಹೇಶ್ ರಾಜೇ ಅರಸ್ ಉಪಸ್ಥಿತರಿದ್ದರು.