ಸಂಪುಟ ರಚನೆಯಲ್ಲಿ ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ

ಬಾಗಲಕೋಟೆ, ಜೂ. 7: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಸಚಿವ ಸಂಪುಟ ರಚನೆಯಲ್ಲಿ ತಮ್ಮನ್ನು ಹಾಗೂ ತನ್ನ ಬೆಂಬಲಿಗರನ್ನು ಕಡೆಗಣಿಸಲಾಗಿದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಶಾಸಕರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ತಮ್ಮ ಆಪ್ತರು ಇಲ್ಲ ಎನ್ನುವುದಕ್ಕಿಂತ ಸದ್ಯ ಮಂತ್ರಿ ಆದವರು ತಮ್ಮ ಪರಮಾಪ್ತರಲ್ಲೇ ಪರಮಾಪ್ತರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ, ಸರಕಾರ ಎಂದು ಹೇಳಿ ಅಧಿಕಾರ ಮಾಡಬೇಕೆ ಹೊರತು ಆಪ್ತರು, ಪರಮಾಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಲ್ಲ ಎಂದ ಸಿದ್ದರಾಮಯ್ಯ, ಖಾಲಿ ಇರುವ ಆರು ಸ್ಥಾನಗಳನ್ನು ಪ್ರಾದೇಶಿಕತೆ, ಜಾತಿವಾರು ಹಾಗೂ ಸಾಮಾಜಿಕ ನ್ಯಾಯದ ಮೇಲೆ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಶರಣಾಗಿದೆ ಎಂಬುದು ಸತ್ಯಕ್ಕೆ ದೂರ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿದ್ದೇವೆ ಎಂದರು. ಐದು ವರ್ಷಗಳ ಅವಧಿಯಲ್ಲಿ ಬಾದಾಮಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು.
ಸಾಂತ್ವನ: ಬಾದಾಮಿ ತಾಲೂಕಿನ ಜಮ್ಮನಕಟ್ಟಿಯಲ್ಲಿ ಮೇ 25ರಂದು ಆತ್ಮಹತ್ಯೆಗೆ ಶರಣಾಗಿದ್ದ ರೈತ ರಾಜಪ್ಪ ಜಲಗೇರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸರಕಾರದ ಪರವಾಗಿ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂ.ಚೆಕ್ ಅನ್ನು ಕುಟುಂಬ ಸದಸ್ಯರಿಗೆ ನೀಡಿದರು.







