ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜೀವ ಬೆದರಿಕೆ: ವೈ-ವರ್ಗದ ಭದ್ರತೆಗೆ ಕೋರಿಕೆ

ಅಹ್ಮದಾಬಾದ್, ಜೂ.7: ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ನಿಯೋಗವೊಂದು ಗುರುವಾರ ಗುಜರಾತ್ ಪೊಲೀಸ್ ಮುಖ್ಯಸ್ಥ ಶಿವಾನಂದ ಝಾ ಅವರನ್ನು ಭೇಟಿಯಾಗಿ ವಡಗಾಮ್ ಕ್ಷೇತ್ರದ ಪಕ್ಷೇತರ ಶಾಸಕರೂ ಆಗಿರುವ ಮಂಚ್‌ನ ಸಂಚಾಲಕ ಜಿಗ್ನೇಶ್ ಮೇವಾನಿ ಅವರಿಗೆ ಈ ವಾರ ಎರಡು ಜೀವ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ವೈ-ವರ್ಗದ ಭದ್ರತೆಯನ್ನೊದಗಿಸುವಂತೆ ಕೋರಿಕೊಂಡಿದೆ.
ಸತತ ಎರಡನೇ ದಿನವಾದ ಗುರುವಾರವೂ ದೂರವಾಣಿ ಮೂಲಕ ತನಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಮೇವಾನಿ ಆಪಾದಿಸಿದ್ದಾರೆ. ಈ ಹಿಂದೆಯೂ ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಮೇವಾನಿಯವರಿಗೆ ಇಂತಹ ಬೆದರಿಕೆಗಳು ಬಂದಿದ್ದವು. ಅವರು ದುರ್ಬಲ ಮತ್ತು ಶೋಷಿತ ವರ್ಗಗಳಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಕೆಲಸದಿಂದ ಯಾರು ಅಸಂತುಷ್ಟಗೊಂಡಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಮೇವಾನಿಯವರ ಸಹವರ್ತಿ ಸುಬೋಧ ಪರಮಾರ್ ಹೇಳಿದರು.
ತನ್ನ ಮೊಬೈಲ್ ಫೋನ್‌ನ್ನು ಉಪಯೋಗಿಸುತ್ತಿರುವ ಸಹವರ್ತಿ ಕೌಶಿಕ್ ಕುಮಾರ್ ಈ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಮೇವಾನಿ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.
ವಡಗಾಮ್‌ನಲ್ಲಿ ಮೇವಾನಿಯವರ ಕಚೇರಿಯನ್ನು ನೋಡಿಕೊಳ್ಳುತ್ತಿರುವ ಪಕ್ಷದ ಇನ್ನೋರ್ವ ಸಂಚಾಲಕರಾಗಿರುವ ಪರಮಾರ್ ನೀಡಿರುವ ದೂರಿನ ಆಧಾರದಲ್ಲಿ ತನ್ನನ್ನು ರಾಜೀವ್ ಮಿಶ್ರಾ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ವಡಗಾಮ್ ಪೊಲೀಸ್ ಠಾಣೆಯ ಪಿಎಸ್‌ಐ ಆರ್.ಪಿ.ಝಲಾ ತಿಳಿಸಿದರು.







