ಸತೀಶ್‌ಗೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ: ರಮೇಶ್ ಜಾರಕಿಹೊಳಿ

ಬೆಳಗಾವಿ, ಜೂ.7: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಆದರೆ, ಸಂದರ್ಭಕ್ಕೆ ಅನುಸಾರವಾಗಿ ತ್ಯಾಗ ಮನೋಭಾವ ಇರಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಗುರುವಾರ ಬೆಳಗಾವಿಗೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಅವರ ಬೆಂಬಲಿಗರು ಅದ್ಧೂರಿಯಾಗಿ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಸಚಿವ ಸ್ಥಾನವನ್ನು ಕೇಳಿದ್ದರು. ಆದರೆ, ನನಗೆ ಸಚಿವ ಸ್ಥಾನ ಸಿಕ್ಕಿದೆ. ಕಳೆದ ಬಾರಿ ನನಗೆ ಕೈ ತಪ್ಪಿದಾಗ ನಾನು ಸುಮ್ಮನಿದ್ದೆ. ಯಾರಾದರೂ ಮಧ್ಯಸ್ಥಿಕೆ ವಹಿಸಿದರೆ ಸತೀಶ್‌ಗೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದರು.
ಸತೀಶ್ ಅನುಭವಿ ರಾಜಕಾರಣಿ, ಭಿನ್ನಮತ ಮಾಡಲು ಸಾಧ್ಯವಿಲ್ಲ. ಅವರ ಹಿಂಬಾಲಕರು ಪ್ರತಿಭಟನೆ ಮಾಡಿದ್ದಾರೆ. ಸತೀಶ್ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಊಹಾಪೋಹದ ಸಂಗತಿ ಎಂದು ಅವರು ಸ್ಪಷ್ಟಣೆ ನೀಡಿದರು.
ಸತೀಶ್ ಮನವೊಲಿಸಲು ಅವರು ಸಣ್ಣ ಹುಡುಗ ಅಲ್ಲ. ರಾಜಕೀಯದಲ್ಲಿ ಪ್ರಬುದ್ಧರಾಗಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ, ಸತೀಶ್, ರಮೇಶ್‌ಗಿಂತ ಪಕ್ಷ ದೊಡ್ಡದು. ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.







