ಸ್ವಸ್ಥ ಭಾರತ ನಿರ್ಮಾಣಕ್ಕೆ ಸ್ವಚ್ಛ ಭಾರತ ಅಭಿಯಾನ ಪೂರಕ : ಪ್ರಧಾನಿ

ಹೊಸದಿಲ್ಲಿ, ಜೂ.7: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನವು ಸ್ವಸ್ಥ(ಆರೋಗ್ಯಕರ) ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನತೆಯೊಂದಿಗೆ ಸರಣಿ ಸಂವಾದ ಕಾರ್ಯಕ್ರಮದ ಅಂಗವಾಗಿ ‘ಹೆಲ್ತ್ ಕಿ ಬಾತ್ ಪಿಎಂ ಕಿ ಬಾತ್’ ಎಂಬ 50 ನಿಮಿಷಾವಧಿಯ ಕಾರ್ಯಕ್ರಮದಲ್ಲಿ ಅವರು ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಉತ್ತಮ ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ರೂಪಿಸುವ ಸರಕಾರದ ಪ್ರಯತ್ನಕ್ಕೆ ದೇಶದ ಎಲ್ಲೆಡೆಗಳಿಂದಲೂ ಸಾರ್ವಜನಿಕರ ಸಹಕಾರ ದೊರೆತಿದೆ. ಹಾಲಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಸ್ವಚ್ಛತೆಯ ವ್ಯಾಪ್ತಿ ಶೇ.90ಕ್ಕೆ (ಈ ಹಿಂದಿನ ಸರಕಾರದ ಅವಧಿಯಲ್ಲಿ ಶೇ.38ರಷ್ಟಿತ್ತು) ತಲುಪಿದೆ ಎಂದ ಅವರು, ಬಯಲುಶೌಚ ಮುಕ್ತ ಗ್ರಾಮದ ಪ್ರತೀ ಕುಟುಂಬವೂ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸುವ 50,000 ರೂ.ಯನ್ನು ಉಳಿಸಬಹುದು ಎಂಬ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿದರು. ಹೀಗೆ ಉಳಿಸಿದ ಹಣವನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ಬಳಸಬಹುದಾಗಿದೆ ಎಂದ ಪ್ರಧಾನಿ, ದೇಶದಲ್ಲಿ ಸುಮಾರು 3.5 ಲಕ್ಷ ಗ್ರಾಮಗಳು ತಮ್ಮನ್ನು ಬಯಲುಶೌಚ ಮುಕ್ತ ಗ್ರಾಮಗಳೆಂದು ಘೋಷಿಸಿಕೊಂಡಿವೆ ಎಂದು ತಿಳಿಸಿದರು.
ಜನೌಷಧಿ ಯೋಜನೆಯ ಯಶಸ್ಸಿನ ಬಗ್ಗೆ ಹಾಗೂ ಕಾರ್ಡಿಯಾಕ್ ಸ್ಟೆಂಟ್‌ಗಳು ಹಾಗೂ ಮಂಡಿ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಅವರು, ಈ ಯೋಜನೆಗಳು ಬಡ ಹಾಗೂ ಮಧ್ಯಮವರ್ಗದ ಜನತೆಯ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಇಳಿಸಿದೆ. ಜನೌಷಧಿ ಕೇಂದ್ರಗಳ ಮೂಲಕ ದುಬಾರಿ ಬೆಲೆಯ ಔಷಧಗಳೂ ಜನಸಾಮಾನ್ಯರಿಗೆ ದೊರಕುವಂತಾಗಿದೆ ಎಂದರು. 2025ರಲ್ಲಿ ದೇಶದಲ್ಲಿ ಕ್ಷಯರೋಗವನ್ನು ನಿರ್ಮೂಲನ ಮಾಡುವ ಗುರಿ ಹೊಂದಲಾಗಿದೆ.ಎಲ್ಲಾ ಮಕ್ಕಳಿಗೂ ರೋಗನಿರೋಧಕ ಚುಚ್ಚುಮದ್ದು ಒದಗಿಸಲು ಸರಕಾರ ಬದ್ಧವಾಗಿದೆ ಎಂದರು.
ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಲ್ಲೇಖಿಸಿದ ಮೋದಿ, ದೈಹಿಕ ಹಾಗೂ ಮಾನಸಿಕ ಕ್ಷಮತೆ ಉಳಿಸಿಕೊಳ್ಳಲು ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಜನತೆಗೆ ಕರೆ ನೀಡಿದರು.







