ಖಾತೆ ಹಂಚಿಕೆಗೆ ಮೊದಲೇ ಸಚಿವ ಎಚ್.ಡಿ.ರೇವಣ್ಣ ಕೊಠಡಿ ಪ್ರವೇಶ..!

ಬೆಂಗಳೂರು, ಜೂ. 7: ಖಾತೆ ಹಂಚಿಕೆಗೆ ಮೊದಲೇ ನೂತನ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಚ್.ಡಿ.ರೇವಣ್ಣ ವಿಧಾನಸೌಧದ ಮೂರನೆ ಮಹಡಿಯಲ್ಲಿನ 316 ಸಂಖ್ಯೆಯ ಕೊಠಡಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೊಠಡಿ ಪ್ರವೇಶ ಮಾಡಿದ್ದಾರೆ.
ಗುರುವಾರ ಮಧ್ಯಾಹ್ನ 12.20ರ ಸುಮಾರಿಗೆ ಕೊಠಡಿ ಪ್ರವೇಶಿಸಿದ ರೇವಣ್ಣ ಮೊದಲಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ವೇಳೆ 316 ಸಂಖ್ಯೆಯ ಕೊಠಡಿಯಲ್ಲೆ ಕಾರ್ಯನಿರ್ವಹಿಸಿದ್ದರು. ಈ ಕೊಠಡಿ ವಾಸ್ತು ಪ್ರಕಾರವಿದ್ದು, ಇದು ರೇವಣ್ಣರ ಅದೃಷ್ಟದ ಕೊಠಡಿ ಎನ್ನಲಾಗಿದೆ.
ಗುಳಿಕ ಕಾಲದಲ್ಲಿ ಎಚ್.ಡಿ.ರೇವಣ್ಣ ತಮ್ಮ ಕೊಠಡಿ ಪ್ರವೇಶ ಮಾಡಿದ್ದಾರೆ. ಕೊಠಡಿ ಪ್ರವೇಶಕ್ಕೂ ಮೊದಲೇ ಕೊಠಡಿ ದ್ವಾರದ ಮುಂದೆ ಕಾಯಿ ಒಡೆಯಲಾಯಿತು. ಬಳಿಕ ಕಚೇರಿ ಒಳಗಡೆ ಪೂಜೆಯನ್ನು ನೆರವೇರಿಸಲಾಯಿತು. ಸಚಿವ ರೇವಣ್ಣ ಕೊಠಡಿ ಪ್ರವೇಶದ ಹಿನ್ನೆಲೆಯಲ್ಲಿ ಬಾಳೆಕಂದು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.
ಈ ವೇಳೆ ನೂತನ ಸಚಿವರಾದ ಬಂಡೆಪ್ಪಕಾಶೆಂಪೂರ್, ಸಾ.ರಾ.ಮಹೇಶ್ ಸೇರಿದಂತೆ ರೇವಣ್ಣನವರ ಹಿತೈಷಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.







