‘ಸ್ಕೌಟ್ಸ್ ಅಂಡ್ ಗೈಟ್ಸ್’ಗೆ ಅನುದಾನ ನೀಡಲು ಸಿಎಂಗೆ ಮನವಿ

ಬೆಂಗಳೂರು, ಜೂ. 7: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚುಟುವಟಿಕೆ ಹಾಗೂ ಸ್ಕೌಟ್ಸ್‌ನ ಅಂತಾರಾಷ್ಟ್ರೀಯ ಸಮ್ಮೇಳನ(ಜಾಂಬೋರಿ)ಕ್ಕೆ 30ಕೋಟಿ ರೂ.ನೆರವು ನೀಡಬೇಕೆಂದು ಸಿಎಂ ಕುಮಾರಸ್ವಾಮಿಯವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಶಾಖೆಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸ್ಕೌಟ್ಸ್ ಅಂಡ್ ಗೈಡ್ಸ್ ಶಾಖೆಯ ಪದಾಧಿಕಾರಿಗಳು, ಪ್ರತಿ ತರಬೇತಿ ಕೇಂದ್ರಗಳಿಗೆ ರಾಜ್ಯ ಸರಕಾರ 10 ಕೋಟಿ ರೂ. ನೇರವು ನೀಡಬೇಕು ಎಂದು ಕೋರಿದರು.
ಸಾಹಸಮಯ ಚಟುವಟಿಕೆ ಬೇಸ್ ನಿರ್ಮಾಣ, ಗುಡಾರಗಳು ಹಾಗೂ ಶಿಕ್ಷಕರ ತರಬೇತಿಗೆ ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಕೇಂದ್ರಗಳಿಗೆ ಒಬ್ಬರು ಗ್ರೂಪ್ ‘ಬಿ’ ಹಾಗೂ ಪ್ರತಿ ತಾಲೂಕಿಗೆ ಗ್ರೂಪ್ ‘ಎ’ ಕಿರಿಯ ಅಧಿಕಾರಿ, ಪ್ರತಿ ಜಿಲ್ಲೆಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಬೇಕು. ಮೂರು ವರ್ಷದಿಂದ ‘ಕರ್ನಾಟಕ ದರ್ಶನ’ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅದಕ್ಕೆ ಅನುದಾನ ಹೆಚ್ಚಳ ಮಾಡಬೇಕು ಎಂದು ಸಿಂಧ್ಯಾ ಇದೇ ವೇಳೆ ಕೋರಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅನುದಾನ ನೀಡುವುದು ಸೇರಿದಂತೆ ಗೈಡ್ಸ್‌ನ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.







