ಸಂಚಾರಕ್ಕೆ ಪರಿಸರ ಸ್ನೇಹಿ ವಾಹನ ಬಳಕೆ ಉತ್ತಮ: ಸಾರಿಗೆ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್
ಬೆಂಗಳೂರು, ಜೂ.7: ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹತ್ತಿರದ ಸಂಚಾರಕ್ಕೆ ಸೈಕಲ್ ಹಾಗೂ ಇನ್ನಿತರೆ ಸಂಚಾರಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಉತ್ತಮವೆಂದು ಸಾರಿಗೆ ಇಲಾಖೆ ಆಯುಕ್ತ ನವೀನ್ ರಾಜ್‌ಸಿಂಗ್ ಹೇಳಿದ್ದಾರೆ.
ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಸಾರಿಗೆ ಇಲಾಖೆಯಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಮಾರಕ ಎಂಬುದು ಬಹುತೇಕ ಜನರಿಗೆ ಗೊತ್ತಿದೆ. ಆದರೆ, ಅನಿವಾರ್ಯ ಕಾರಣಗಳಿಗೆ ಅವುಗಳನ್ನು ಬಳಸಬೇಕಾಗಿದೆ. ಆದರೂ ಮುಂದಿನ ದಿನಗಳಲ್ಲಿ ಇದರ ಬಳಕೆಯನ್ನು ಕಡಿಮೆ ಮಾಡಲು ದೃಢ ನಿರ್ಧಾರ ಮಾಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರು ಸಸಿ ನೆಟ್ಟು ತಮ್ಮ ಮಕ್ಕಳಂತೆ ಪೋಷಿಸಬೇಕು. ಪರಿಸರ ಹಸಿರು ಮಯಗೊಂಡಷ್ಟು ಅದರಿಂದ ನಮಗೆ ಹೆಚ್ಚು ಲಾಭವಾಗಲಿದೆ. ಈ ನಿಟ್ಟಿನಲ್ಲಿ ಸಸಿಗಳನ್ನು ನೆಡುವಂತಹದ್ದು ಆಂದೋಲನವಾಗಿ ರೂಪುಗೊಳ್ಳಲಿ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





